ಮುಂಬೈ: ಚುನಾವಣಾ ಪ್ರಕ್ರಿಯೆಯ ಸುಧಾರಣೆಗಳಿಗಾಗಿ ಕಾನೂನು ಜಾರಿಯಾದರೆ ಅದರ ಬಗ್ಗೆ ಆಕ್ಷೇಪವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶನಿವಾರ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಮುನ್ನ ಹಲವು ಸ್ಥಾನಗಳಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುತ್ತಿರುವ ಕಾರಣ, 'ಕುದುರೆ ವ್ಯಾಪಾರ' ತಡೆಗೆ ಸಂಸತ್ತಿನಲ್ಲಿ ಮಸೂದೆ ಮಂಡಿಸುವುದಾಗಿ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದ್ದಾರೆ.
'ಹಣಕ್ಕಿಂತ ಹೆಚ್ಚಾಗಿ ಪ್ರೀತಿಯ ಮೂಲಕ ಜನರನ್ನು ಗೆಲ್ಲಬಹುದು ಎಂಬುದನ್ನು ಅರ್ಥಮಾಡಿಕೊಂಡರೆ, ಅಂತಹ ಮಸೂದೆಯ ಅಗತ್ಯವಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳಾಗಬೇಕು ಎಂಬುದು ಅವರ ವೈಯಕ್ತಿಕ ಅಭಿಪ್ರಾಯ. ಅಂತಹ ಸುಧಾರಣೆಗಳಿಗಾಗಿ ಕಾನೂನು ಜಾರಿಗೆ ತಂದರೆ ನನಗೆ ಯಾವುದೇ ಆಕ್ಷೇಪವಿಲ್ಲ' ಎಂದು ಹೇಳಿದ್ದಾರೆ.
ಆಡಳಿತರೂಢ ಪಕ್ಷಗಳು ಆರ್ಥಿಕ ಪ್ರಚೋದನೆ ಮತ್ತು ಒತ್ತಡ ತಂತ್ರಗಳನ್ನು ಬಳಸುತ್ತಿವೆ ಎಂದು ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಆರೋಪಿಸಿದೆ. ಆದರೆ, ಈ ಅರೋಪವನ್ನು ಬಿಜೆಪಿ ನೇತೃತ್ವದ ಮಹಾಯುತಿ ನಾಯಕರು ನಿಕಾರಿಸಿದ್ದಾರೆ.

