ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ), ದೇಶದಾದ್ಯಂತ ಯುವಜನರ ಬೆಂಬಲಗಳಿಸುವಲ್ಲಿ ಯಶಸ್ವಿಯಾಗಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಿರುದ್ಯೋಗಿ ಯುವಕರನ್ನು ಪರಾವಲಂಬಿಗಳೆಂದು, ಅವರು ಜಿರಳೆಗೆ ಹೋಲಿಸಿದ್ದನ್ನು ವ್ಯಂಗ್ಯವಾಗಿ ಬಳಸಿಕೊಂಡು ಮೀಮ್ ರೂಪದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಉದಯವಾಗಿತ್ತು. ಕೆಲವೇ ದಿನಗಳಲ್ಲೇ, ಜಾಲತಾಣದಲ್ಲಿ ಸಿಜೆಪಿ ಕುರಿತು ಪರ ಮತ್ತು ವಿರೋಧ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದ್ದವು. ಈ ಹೋರಾಟವು ಬರೀ ಜಾಲತಾಣಕ್ಕೆ ಮಾತ್ರ ಸೀಮಿತವೇ ಎನ್ನುವ ಪ್ರಶ್ನೆಗಳು ಕೂಡ ಎದ್ದಿದ್ದವು.
ಇದೀಗ ಕಾಕ್ರೋಚ್ ಜನತಾ ಪಾರ್ಟಿಯು ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಜೂನ್ 6ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಮೂಲಕ, ಜಾಲತಾಣದಿಂದ ಹೊರ ಜಗತ್ತಿಗೂ ತನ್ನ ಹೆಜ್ಜೆಯನ್ನು ಇಡಲು ಶುರು ಮಾಡಿದೆ.
ಕಾಕ್ರೋಚ್‌ಗಳ ಹಿಂದೆಯಿದ್ದ ಅಭಿಜೀತ್ ದೀಪ್ಕೆ: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ದಾಪಕ ಅಭಿಜೀತ್ ದೀಪ್ಕೆ, ಸದ್ಯ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾರೆ. ಅವರು ಈ ಹಿಂದೆ ಆಮ್ ಆದ್ಮಿ ಪಾರ್ಟಿ(ಎಎಪಿ) ಪರವಾಗಿ ಕೂಡ ಗುರುತಿಸಿಕೊಂಡಿದ್ದರು. ಇವರು ಆರಂಭಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಇನ್‌ಸ್ಟಾಗ್ರಾಮ್ ಖಾತೆಯು ಕೇವಲ 5 ದಿನಗಳಲ್ಲಿ 2 ಕೋಟಿಗೂ ಹೆಚ್ಚು ಹಿಂಬಾಲಕರನ್ನು ಪಡೆದುಕೊಳ್ಳುವ ಮೂಲಕ ಗಮನಸೆಳೆದಿತ್ತು. ಇದು ದೇಶದ ಪ್ರಮುಖ ರಾಜಕೀಯ ಪಕ್ಷಗಳ ಹಿಂಬಾಲಕರಿಗಿಂತ ಹೆಚ್ಚಿನದ್ದಾಗಿದೆ.
ಸಿಜೆಪಿಯ ಪಾರದರ್ಶಕತೆ ಕುರಿತು ಕೂಡ ಪ್ರಶ್ನೆಗಳು ಎದ್ದಿದ್ದವು, ಅದಕ್ಕೆ ಉತ್ತರಿಸಿದ ಸಿಜೆಪಿ, ನಾವು ಯಾವುದೇ ಗುಪ್ತ ನಿಧಿಯನ್ನು ಹೊಂದಿಲ್ಲ ಮತ್ತು ಆರ್‌ಟಿಐ ವ್ಯಾಪ್ತಿಗೆ ಒಳಪಟ್ಟಿದ್ದೇವೆ ಎಂದು ಹೇಳಿಕೊಂಡಿದೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಜೂನ್ 6ರ ಬೆಳಿಗ್ಗೆ ಅಮೆರಿಕದಿಂದ ದೆಹಲಿಗೆ ಆಗಮಿಸಲಿದ್ದು, ನಂತರ ಪೊಲೀಸರ ಅನುಮತಿ ಪಡೆದುಕೊಂಡು ಪ್ರತಿಭಟನೆ ನಡೆಸಲಿದ್ದಾರೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಕಾಕ್ರೋಚ್ ಜನತಾ ಪಾರ್ಟಿಯು 'ಸೋಮಾರಿ ಹಾಗೂ ನಿರುದ್ಯೋಗಿಗಳ ಧ್ವನಿ' ಎಂಬ ವ್ಯಂಗ್ಯದ ಟ್ಯಾಗ್‌ಲೈನ್ ಮೂಲಕ ಗಮನ ಸೆಳೆದಿತ್ತು. ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾದ ನಂತರ, ಇದೀಗ ನಿಜವಾದ ಆಖಾಡಕ್ಕೆ ಧುಮುಕಿದ್ದು, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಲೋಪದೋಷಗಳ ವಿರುದ್ಧ ತಿರುಗಿಬಿದ್ದಿದೆ.
'ಕಾಕ್ರೋಚ್'ನ ಪ್ರಮುಖ ಬೇಡಿಕೆಗಳು: ಸಿಜೆಪಿಯು ಜೂನ್ 6ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ: ಇತ್ತೀಚೆಗೆ ನಡೆದ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು ಹಾಗೂ ಸಿಬಿಎಸ್‌ಇ 12ನೇ ತರಗತಿಯ ಮೌಲ್ಯಮಾಪನದಲ್ಲಿ ಉಂಟಾದ ತಾಂತ್ರಿಕ ದೋಷಗಳ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಸಿಜೆಪಿ ಆಗ್ರಹಿಸಿದೆ.
ಉದ್ಯೋಗದ ಹಕ್ಕು: 21 ರಿಂದ 60 ವರ್ಷದೊಳಗಿನ ನಾಗರಿಕರಿಗೆ ಉದ್ಯೋಗ ಭದ್ರತೆ ಅಥವಾ ನಿರುದ್ಯೋಗ ಭತ್ಯೆ ನೀಡುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.
ಸಾರ್ವಜನಿಕ ಶಿಕ್ಷಣ ಸುಧಾರಣೆ: ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ತಡೆದು, ಮಧ್ಯಮ ವರ್ಗಕ್ಕೆ ಕೈಗೆಟುಕುವ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
'ಕಾಕ್ರೋಚ್' ಚಳವಳಿಗೆ ಯಾರ ಬೆಂಬಲವಿದೆ?:
ಜೆನ್-ಝೀ ಯುವಕರ ಹೋರಾಟ ಎಂದೇ ಕರೆಯಲ್ಪಡುತ್ತಿರುವ ಈ ಕಾಕ್ರೋಚ್ ಚಳವಳಿಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ನಾಯಕರು ಕೂಡ ಬೆಂಬಲ ನೀಡಿದ್ದಾರೆ.
ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ಹಲವು ವಿರೋಧ ಪಕ್ಷಗಳು ಬಹಿರಂಗ ಬೆಂಬಲ ಘೋಷಿಸಿವೆ. ಸೋನಮ್ ವಾಂಗ್‌ಚುಕ್, ಅಣ್ಣಾ ಹಜಾರೆ, ಪ್ರಶಾಂತ್ ಭೂಷಣ್ ಕೂಡ ಬೆಂಬಲ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವರಾದ ಸುಕಾಂತ ಮಜುಂದಾರ್, ಕಿರಣ್ ರಿಜಿಜು ಮುಂತಾದವರು ಕಾಕ್ರೋಚ್ ಪಕ್ಷವು ವಿದೇಶಿ ಬಂಡವಾಳದಿಂದ ಪ್ರೇರೇಪಿತವಾಗಿರುವ ಹೋರಾಟ ಎಂದು ಟೀಕೆ ಮಾಡಿದ್ದಾರೆ.

