ನವದೆಹಲಿ: ಭೂಮಧ್ಯರೇಖೆಯ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ಲಕ್ಷಣಗಳು ಕಾಣಿಸಿಕೊಂಡಿದ್ದು ಭಾರತವು ತೀವ್ರವಾದ ಬೇಸಿಗೆ ಮತ್ತು ದುರ್ಬಲ ಮುಂಗಾರು ಮಳೆಯನ್ನು ಎದುರು ನೋಡುತ್ತಿದೆ ಎಂದು ಹವಾಮಾನ ಸಂಸ್ಥೆಗಳು ತಿಳಿಸಿವೆ. ಏಶ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಉಷ್ಣತೆ ಮತ್ತು ಶುಷ್ಕ ಹವಾಮಾನದ ಸಾಧ್ಯತೆಯ ಮುನ್ನೆಚ್ಚರಿಕೆಯನ್ನು ಎಲ್ ನಿನೋ ಲಕ್ಷಣಗಳು ನೀಡಿವೆ.
''ಎಲ್ ನಿನೊ ಪರಿಸ್ಥಿತಿ ಆರಂಭವಾಗಿರುವ ಕುರಿತು ಶೀಘ್ರದಲ್ಲೇ ನಾವು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ'' ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ತಿಳಿಸಿದರು.
ಎಲ್ ನಿನೊ ವಿದ್ಯಮಾನವನ್ನು ಸೂಚಿಸುವ ಸಾಗರ ಮತ್ತು ವಾತಾವರಣ ಸ್ಥಿತಿಗತಿಗಳು ಈಗಾಗಲೇ ಪೆಸಿಫಿಕ್ ಸಾಗರದ ಭೂಮಧ್ಯರೇಖೆಯ ಭಾಗದಲ್ಲಿ ಗೋಚರಿಸಿವೆ ಎಂದು ಜಪಾನ್ ಹವಾಮಾನ ಸಂಸ್ಥೆ ಬುಧವಾರ ತಿಳಿಸಿದೆ. ಎಲ್ ನಿನೊ ಪರಿಸ್ಥಿತಿ ಪ್ರಸ್ತುತ ರೂಪುಗೊಳ್ಳುತ್ತಿರುವುದನ್ನು ಇದು ಸೂಚಿಸಿದೆ.
ಭಾರತದಲ್ಲಿ, ಎಲ್ ನಿನೊ ಸಾಮಾನ್ಯವಾಗಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ತೀವ್ರ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಈ ಬಾರಿ ದೇಶದಲ್ಲಿ ಒಟ್ಟಾರೆ ಮಳೆಯ ಪ್ರಮಾಣವು ದೀರ್ಘಾವಧಿ ಸರಾಸರಿಯ ಶೇ. 90 ರಷ್ಟು ಮಾತ್ರ ಇರಲಿದೆ ಹಾಗೂ ಇದು ವಾಡಿಕೆಗಿಂತ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಇತ್ತೀಚೆಗೆ ತಿಳಿಸಿದೆ. ಇದಕ್ಕೂ ಮುನ್ನ ಎಪ್ರಿಲ್‌ನಲ್ಲಿ ನೀಡಿದ್ದ ಮುನ್ಸೂಚನೆಯಲ್ಲಿ, ದೀರ್ಘಾವಧಿ ಸರಾಸರಿಯ ಶೇ. 92 ರಷ್ಟು ಮಳೆಯಾಗಲಿದೆ ಎಂದು ಅದು ಹೇಳಿತ್ತು.
ಭಾರತದ ಆರ್ಥಿಕತೆಗೆ ನೈಋತ್ಯ ಮುಂಗಾರು ಅತ್ಯಂತ ನಿರ್ಣಾಯಕವಾಗಿದೆ. ಏಕೆಂದರೆ ದೇಶದ ಒಟ್ಟು ಬಿತ್ತನೆ ಪ್ರದೇಶದ ಸುಮಾರು ಅರ್ಧದಷ್ಟು ಭಾಗಕ್ಕೆ ಯಾವುದೇ ನೀರಾವರಿ ಸೌಲಭ್ಯವಿಲ್ಲ. ಅಲ್ಲದೆ, ಈ ಮುಂಗಾರು ಮಳೆಯು ಕುಡಿಯುವ ನೀರು, ಕೈಗಾರಿಕೆಗಳು ಮತ್ತು ವಿದ್ಯುತ್ ಉತ್ಪಾದನೆಗೆ ಆಧಾರವಾಗಿರುವ 91 ಪ್ರಮುಖ ಜಲಾಶಯಗಳನ್ನು ಮರುಪೂರಣಗೊಳಿಸುತ್ತದೆ.
ಜಾಗತಿಕ ರಾಜಕೀಯ ಪರಿಸ್ಥಿತಿ ಮತ್ತು ಹವಾಮಾನ ವೈಪರೀತ್ಯಗಳ ಹಿನ್ನೆಲೆಯಲ್ಲಿ ಈ ವರ್ಷದ ಮುಂಗಾರು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪಶ್ಚಿಮ ಏಶ್ಯದಲ್ಲಿನ ಸಂಘರ್ಷದಿಂದಾಗಿ ರೈತರು ಈಗಾಗಲೇ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಎಲ್ ನಿನೊ ಪರಿಸ್ಥಿತಿಯು ಮಳೆಯ ಪ್ರಮಾಣವನ್ನು ಇನ್ನಷ್ಟು ಕುಂಠಿತಗೊಳಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
''ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ನಮ್ಮ ಮನೆ ಬಾಗಿಲಿಗೆ ಬರುವುದು ಶೇ. 90ರಷ್ಟು ಖಚಿತವಾಗಿದೆ. ಜಗತ್ತು ಇದನ್ನು ತುರ್ತು ಹವಾಮಾನ ಎಚ್ಚರಿಕೆ ಎಂದು ಪರಿಗಣಿಸಬೇಕು'' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಜೂನ್ 2 ರಂದು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿರುವುದನ್ನು ಸ್ಮರಿಸಬಹುದಾಗಿದೆ.

