ಚೆನ್ನೈ: ತಮಿಳು ಕವಿ ತಿರುವಳ್ಳುವರ್ ಅವರು ಕೇಸರಿ ಬಣ್ಣದ ಉಡುಪಿನಲ್ಲಿರುವ ಚಿತ್ರವನ್ನು ಲೋಕಭವನದಲ್ಲಿ ಪ್ರದರ್ಶಿಸಿರುವ ಕ್ರಮವನ್ನು ತಮಿಳುನಾಡಿನ ಆಡಳಿತಾರೂಢ ಟಿವಿಕೆ ಮತ್ತು ವಿರೋಧ ಪಕ್ಷ ಡಿಎಂಕೆ ಟೀಕಿಸಿದೆ.
ಮೇ 30ರಂದು ನಡೆದ 'ವೈಕಾಸಿ ಅನುಷಂ' ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಲೋಕಭವನದಲ್ಲಿ ತಿರುವಳ್ಳುವರ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ್ದರು.
ಆ ಭಾವಚಿತ್ರದಲ್ಲಿ ತಿರುವಳ್ಳುವರ್ ಅವರನ್ನು ಕೇಸರಿ ವಸ್ತ್ರ ಧರಿಸಿರುವಂತೆ ಚಿತ್ರಿಸಲಾಗಿತ್ತು. ಸಾಮಾನ್ಯವಾಗಿ ತಿರುವಳ್ಳುವರ್ ಅವರನ್ನು ಎಲ್ಲ ಭಾವಚಿತ್ರಗಳಲ್ಲೂ ಬಿಳಿ ಉಡುಪಿನಲ್ಲಿ ಕಾಣಬಹುದು.
ಲೋಕಭವನದ ಕ್ರಮಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಅರುಣ್ ರಾಜ್, 'ಇಡೀ ಜಗತ್ತಿಗೆ ಸೇರಿರುವ ತತ್ವಜ್ಞಾನಿಯನ್ನು ಒಂದು ಸಂಕುಚಿತ ಗುರುತಿನೊಳಗೆ ಬಂಧಿಸುವ ಪ್ರಯತ್ನವು ಅವರ ಘನತೆಯನ್ನು ಕುಗ್ಗಿಸುತ್ತದೆ' ಎಂದು ಹೇಳಿದ್ದಾರೆ.
'ಲೋಕಭವನ ಅಥವಾ ಯಾವುದೇ ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಿರುವಳ್ಳುವರ್ ಅವರನ್ನು ಕೇಸರಿ ವಸ್ತ್ರ ಧರಿಸಿದ ರೀತಿಯಲ್ಲಿ ಚಿತ್ರಿಸಿರುವುದು ತಪ್ಪು. ತಿರುವಳ್ಳುವರ್ ಅವರು ಯಾವುದೇ ಧರ್ಮ, ಜಾತಿ, ಜನಾಂಗ ಅಥವಾ ದೇಶಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಅವರ 'ತಿರುಕ್ಕುರಲ್' ಗ್ರಂಥ ಯಾವುದೇ ಒಂದು ವರ್ಗ, ಜಾತಿಗೆ ಸೀಮಿತವಾಗಿಲ್ಲ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ರಾಜ್ಯಪಾಲರ ನಿವಾಸದಲ್ಲಿ ತಿರುವಳ್ಳುವರ್ ಅವರನ್ನು ಕೇಸರಿ ಬಣ್ಣದ ಉಡುಪು ತೊಟ್ಟಂತೆ ಚಿತ್ರಿಸಲಾಗಿದೆ. ಈಗಿನ ಮುಖ್ಯಮಂತ್ರಿ ಯಾವಾಗಲೂ 'ಮೌನ'ವಾಗಿರುತ್ತಾರೆ ಎಂಬುದು ಖಾತರಿಯಾಗಿರುವ ಕಾರಣ ಅವರು ಇಂತಹ ಕೆಲಸ ಮಾಡುತ್ತಿದ್ದಾರೆ' ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ತಿರುವಳ್ಳುವರ್ ಹುಟ್ಟಿನಿಂದ ಸಮಾನತೆಯನ್ನು ಪ್ರತಿಪಾದಿಸಿದರೆ, ರಾಜ್ಯಪಾಲರು ಅವರನ್ನು ಸನಾತನಿಗಳೆಂದು ವ್ಯಾಖ್ಯಾನಿಸುತ್ತಾರೆ. ಇದು ತಿರುವಳ್ಳುವರ್ ಅವರಿಗೆ ಮಾಡಿದ ಅವಮಾನ. ಇದಕ್ಕಾಗಿ ರಾಜ್ಯಪಾಲರು ಕ್ಷಮೆಯಾಚಿಸಬೇಕು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಆಗ್ರಹಿಸಿದ್ದಾರೆ.

