HEALTH TIPS

ಅಯೋಧ್ಯೆ ರಾಮಮಂದಿರ 'ಕಾಣಿಕೆ ಹಣ ನಾಪತ್ತೆ' ಪ್ರಕರಣ: ಮತ್ತೆರಡು ಪ್ರಕರಣ ದಾಖಲು

 ಲಖನೌ: ಅಯೋಧ್ಯೆಯ ರಾಮಮಂದಿರದ 'ಕಾಣಿಕೆ ಹಣ ನಾಪತ್ತೆ' ಪ್ರಕರಣಕ್ಕೆ ಸಂಬಂಧಿಸಿ ರಾಮ ಮಂದಿರ ಟ್ರಸ್ಟ್‌ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ, ರಾಮ ಜನ್ಮಭೂಮಿ ಪೊಲೀಸ್‌ ಠಾಣೆಯಲ್ಲಿ ಹೊಸದಾಗಿ ಎರಡು ಪ್ರಕರಣಗಳು ದಾಖಲಾಗಿವೆ.


ರಾಮ ಮಂದಿರ ಚಳವಳಿಯಲ್ಲಿ ಬಿಜೆಪಿ ಮುಖಂಡ ಎಲ್‌.ಕೆ ಅಡ್ವಾಣಿ ಅವರೊಂದಿಗೆ ಕರಸೇವಕರಾಗಿ ಭಾಗಿಯಾಗಿದ್ದ, 'ಧರ್ಮ ಸೇನಾ' ಸಮಿತಿಯ ಅಧ್ಯಕ್ಷ ಸಂತೋಷ್‌ ದುಬೆ ಎಂಬುವರು ಟ್ರಸ್ಟ್‌ ಪದಾಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದರೆ ಕೋರ್ಟ್‌ ಮೊರೆ ಹೋಗುವುದಾಗಿ ಅವರು ಎಚ್ಚರಿಸಿದ್ದಾರೆ.

'ಟ್ರಸ್ಟ್‌ ಪದಾಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಯುವ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ ಶರದ್‌ ಶುಕ್ಲಾ ಇನ್ನೊಂದು ದೂರು ದಾಖಲಿಸಿದ್ದಾರೆ.

'ಕಾಣಿಕೆ ಹಣ ನಾಪತ್ತೆ ಪ್ರಕರಣವನ್ನು ಸಾಮೂಹಿಕ ಲೂಟಿ' ಎಂದಿರುವ ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ರಾಯ್‌, 'ಆರ್‌ಎಸ್‌ಎಸ್‌ ಹಿನ್ನೆಲೆಯವರನ್ನು ರಾಮ ಮಂದಿರ ಟ್ರಸ್ಟ್‌ನ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಈ ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದ್ದಾರೆ.

'ಹಣ ನಾಪತ್ತೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ, ಮಂದಿರದಲ್ಲಿ ಕಾಣಿಕೆ ಮೊತ್ತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ರಾಮಶಂಕರ್‌ ಯಾದವ್‌, ಲವಕುಶ ಮಿಶ್ರಾ, ಅನುಕಲ್ಪ ಮಿಶ್ರಾ ಸೇರಿ ಐವರು ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಆಯೋಧ್ಯೆಯ ಲವಕುಶ ಮಿಶ್ರಾ ನಿವಾಸದಲ್ಲಿ ಪೊಲೀಸರು ಈಚೆಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ₹12 ಲಕ್ಷ ನಗದು ಪತ್ತೆಯಾಗಿತ್ತು.

'ಕಾಣಿಕೆ ಹಣ ದುರುಪಯೋಗದಲ್ಲಿ ಭಾಗಿಯಾದವರು ಯಾರು ಎನ್ನುವುದು ಎಸ್‌ಐಟಿ ತನಿಖೆಯಿಂದ ಹೊರಬೀಳಲಿದೆ' ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

10ಕ್ಕೂ ಹೆಚ್ಚು ಆರೋಪಿಗಳ ವಿಚಾರಣೆ

ಹಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ಮಂಗಳವಾರ 10ಕ್ಕೂ ಹೆಚ್ಚು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧಿಕಾರಿ ಗೋಪಾಲ ರಾವ್‌ ಸೇರಿ ಮಂದಿರದ ಕಾಣಿಕೆ ಹಣದ ಜತೆಗೆ ನೇರ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಸತತ 8 ಗಂಟೆ ಮಂದಿರದ ಆವರಣದಲ್ಲೇ ವಿಚಾರಣೆಗೆ ಒಳಪಡಿಸಿತು. ಲಖನೌ ಪ್ರಾದೇಶಿಕ ಆಯುಕ್ತ ವಿಜಯ್‌ ವಿಶ್ವಾಸ್‌ ಪಂತ್‌ ಐಜಿಪಿ ಕಿರಣ್‌ ಎಸ್‌ ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್‌ ರತನ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು ಒಂದು ವಾರದೊಳಗೆ ಮಧ್ಯಂತರ ವರದಿ ಮತ್ತು 15 ದಿನಗಳ ಒಳಗೆ ಅಂತಿಮ ವರದಿ ಸಲ್ಲಿಸಲು ಸೂಚಿಸಲಾಗಿದೆ. 'ಹಣ ನಾಪತ್ತೆ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ ನನ್ನ ವಿರುದ್ಧದ ಆರೋಪ ನಿರಾಧಾರ' ಎಂದು ಕಾಣಿಕೆ ಹಣ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದ ರಾಮಶಂಕರ್‌ ಯಾದವ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries