ನವದೆಹಲಿ: ಭಿನ್ನಾಭಿಪ್ರಾಯದ ಎತ್ತಿದಾಗಲೆಲ್ಲ ಭಾರತದಲ್ಲಿ ಹೆಚ್ಚಾಗಿ ವ್ಯಕ್ತವಾಗುತ್ತಿರುವ ಪ್ರತಿರೋಧ ಕುರಿತು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಪ್ರಶ್ನೆ ಕೇಳಲು ಸಭಿಕರೊಬ್ಬರು ಮುಂದಾದಾಗ ಅವರಿಗೆ ತಡೆಯೊಡ್ಡಿದ ಪ್ರಸಂಗ ಲಂಡನ್‌ನಲ್ಲಿ ನಡೆದಿದೆ.
ಲಂಡನ್ ವಿಶ್ವವಿದ್ಯಾಲಯದ ಬ್ರಿಕ್‌ಬೆಕ್ ಕಾಲೇಜಿನಲ್ಲಿ ಆಯೋಜಿಸಿದ್ದ 'ಕೃತಕ ಬುದ್ಧಿಮತ್ತೆ ಹಾಗೂ ಅಂತರ ರಾಷ್ಟ್ರೀಯ ಕಾನೂನು' ಕುರಿತ ಕಾರ್ಯಾಗಾರದಲ್ಲಿ ಸಿಜೆಐ ಭಾಷಣ ಮಾಡಿ ಸಭಿಕರ ಜತೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಸಭಿಕ ರೊಬ್ಬರು, 'ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ ಸಂಬಂಧಿಸಿದ ಭಾರತದ ಮಾಹಿತಿಯನ್ನು ನಾನು ಗಮನಹರಿಸಿದೆ. ಭಿನ್ನಾಭಿಪ್ರಾಯದ ವಿರುದ್ಧ ದ್ವೇಷ ಹೆಚ್ಚುತ್ತಿದ್ದು, ದೇಶದ ಒಳಗೆ ಹಾಗೂ ಹೊರಗೆ ಕಾನೂನಿನ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ' ಎಂದು ಪ್ರಶ್ನೆ ಕೇಳಿದರು.
ಈ ವೇಳೆ ವೇದಿಕೆಯಲ್ಲಿದ್ದ ವ್ಯಕ್ತಿ ಯೊಬ್ಬರು ಮಧ್ಯ ಪ್ರವೇಶಿಸಿ ಅವರನ್ನು ಇನ್ನಷ್ಟು ಮಾತನಾಡದಂತೆ ತಡೆದರು.
'ನಿಮ್ಮ ಪ್ರಶ್ನೆಯು ಎ.ಐ ವಿಷಯಕ್ಕಷ್ಟೇ ಸೀಮಿತವಾಗಿರಬೇಕು. ಉಳಿದ ಪ್ರಶ್ನೆಗಳಿಗೆ ಅವಕಾಶವಿಲ್ಲ... ಕ್ಷಮೆ ಇರಲಿ' ಎಂದು ಅರ್ಧಕ್ಕೆ ತಡೆದರು. ಇಬ್ಬರು ನಡುವಿನ ಈ ಸಂವಾದವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾಕ್ರೋಚ್ ಜನತಾ ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್ ಕೂಡ ಈ ವಿಡಿಯೊ ಹಂಚಿಕೊಂಡಿದ್ದಾರೆ.
ಎಐ ಊಹಾತ್ಮಕ ತಂತ್ರಜ್ಞಾನವಲ್ಲ: 'ಕೃತಕ ಬುದ್ಧಿಮತ್ತೆ (ಎ.ಐ) ಎಂಬುದು ಊಹಾತ್ಮಕ ತಂತ್ರಜ್ಞಾನವಾಗಿರುವುದಿಲ್ಲ. ಕಾರ್ಯಾಚರಣೆಯ ವಾಸ್ತವವಾಗಿರಲಿದೆ. ಅಂತರರಾಷ್ಟ್ರೀಯ ಕಾನೂನಿಗೂ ಮಹತ್ವದ ಪರೀಕ್ಷೆಯನ್ನು ಒಡ್ಡಲಿದೆ' ಎಂದು ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.
'ತಂತ್ರಜ್ಞಾನವು ಸಹಜವಾಗಿ ಪರೋಪಕಾರಿಯೂ ಅಲ್ಲ, ಹಾನಿಕಾರಕವೂ ಅಲ್ಲ' ಎಂದು ಅವರು ಒತ್ತಿ ಹೇಳಿದರು.
'ಹಿಂದಿನ ತಾಂತ್ರಿಕ ಕ್ರಾಂತಿಗಳಿಗಿಂದ ಎಐ ಎಂಬುದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವುದಿಲ್ಲ. ನಿರ್ಧಾರ ತೆಗೆದು ಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿದೆ' ಎಂದು ತಿಳಿಸಿದರು.
'ಎಐ ಎಂಬುದು ಕಾರ್ಯಾಚರಣೆಯ ವಾಸ್ತವವಾಗಿರಲಿದೆ. ಆಡಳಿತ, ವಾಣಿಜ್ಯ, ಯುದ್ಧ, ಸಂವಹನ, ಸಾರ್ವಜನಿಕ ಆಡಳಿತ ಹಾಗೂ ನ್ಯಾಯಾಂಗ ಹಾಗೂ ಸಾರ್ವಭೌಮದ ಅಧಿಕಾರವನ್ನು ಪುನರ್ ರೂಪಿಸಲಿದೆ' ಎಂದು ಸೂರ್ಯಕಾಂತ್ ಹೇಳಿದರು.

