HEALTH TIPS

ವಿಶ್ವಕಪ್‌ಗೆ ತೆರಳಲು ಅಮೆರಿಕ ವೀಸಾ ನಿರಾಕರಣೆ: ಫೆಲೆಸ್ತೀನ್ ಫುಟ್‌ಬಾಲ್ ಮುಖ್ಯಸ್ಥರ ಆರೋಪ

ಮೆಕ್ಸಿಕೊ ಸಿಟಿ: 2026ರ ಫಿಫಾ ವಿಶ್ವಕಪ್‌ ನಲ್ಲಿ ಭಾಗವಹಿಸಲು ಅಮೆರಿಕ ಪ್ರವೇಶ ವೀಸಾ ನೀಡಲಾಗಿಲ್ಲ ಎಂದು ಫೆಲೆಸ್ತೀನ್ ಫುಟ್‌ಬಾಲ್ ಅಸೋಸಿಯೇಷನ್‌ (PFA) ಅಧ್ಯಕ್ಷ ಜಿಬ್ರಿಲ್ ರಜೌಬ್ ಆರೋಪಿಸಿದ್ದಾರೆ. ವಿಶ್ವಕಪ್‌ ಗೆ ಆಹ್ವಾನಿತರಾಗಿರುವ ಇತರ ರಾಷ್ಟ್ರಗಳ ಫುಟ್‌ಬಾಲ್ ಫೆಡರೇಶನ್‌ಗಳ ಮುಖ್ಯಸ್ಥರೊಂದಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ದೊರೆಯುವ ನಿರೀಕ್ಷೆಯಲ್ಲಿ ಅವರು ಮೆಕ್ಸಿಕೊ ನಗರದಲ್ಲಿ ಕಾಯುತ್ತಿದ್ದಾರೆ.

ಗುರುವಾರ ನಡೆದ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ರಜೌಬ್ ಹಾಜರಾಗಿದ್ದರು. ಆದರೆ, ಅಮೆರಿಕ ವೀಸಾ ನಿರಾಕರಿಸಲ್ಪಟ್ಟಿರುವ ಅಥವಾ ಇನ್ನೂ ವೀಸಾ ಮಂಜೂರಾತಿ ದೊರೆಯದಿರುವ ಹಲವು ಪ್ರತಿನಿಧಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ.

'ವಿಶ್ವದ ಎಲ್ಲ ಫುಟ್‌ಬಾಲ್ ಪ್ರತಿನಿಧಿಗಳಿಗೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಹಕ್ಕಿದೆ. ಆ ಹಕ್ಕನ್ನು ನಿರಾಕರಿಸುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು ನ್ಯಾಯಯುತವಲ್ಲ' ಎಂದು ಹಿರಿಯ ಫೆಲೆಸ್ತೀನ್ ರಾಜಕೀಯ ನಾಯಕರೂ ಆಗಿರುವ ರಜೌಬ್, ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಫೆಲೆಸ್ತೀನ್ ತಂಡವು 2026ರ ವಿಶ್ವಕಪ್‌ಗೆ ಅರ್ಹತೆ ಪಡೆಯದಿದ್ದರೂ, ವಿಶ್ವದ ವಿವಿಧ ರಾಷ್ಟ್ರಗಳ ಫುಟ್‌ಬಾಲ್ ಸಂಘಗಳ ಮುಖ್ಯಸ್ಥರನ್ನು ಪಂದ್ಯಾವಳಿಗೆ ಆಹ್ವಾನಿಸುವ ಪದ್ಧತಿಯನ್ನು ಫಿಫಾ ಮುಂದುವರಿಸಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಟೂರ್ನಿಯನ್ನು ಜಾಗತಿಕ ಏಕತೆಯ ಆಚರಣೆಯಾಗಿ ಫಿಫಾ ಬಿಂಬಿಸುತ್ತದೆ.

'ಮುಂದಿನ ವರ್ಷದ ಫಿಫಾ ವಿಶ್ವಕಪ್‌ ಗಾಗಿ ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕದಲ್ಲಿ ಎಲ್ಲರಿಗೂ ಸ್ವಾಗತವಿದೆ. ಅದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ' ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಕಳೆದ ವರ್ಷ ಹೇಳಿದ್ದರು.

ಆದರೆ, ಸೊಮಾಲಿಯಾದ ರೆಫರಿ ಹಾಗೂ ಇರಾಕ್ ತಂಡದೊಂದಿಗೆ ಪ್ರಯಾಣಿಸುತ್ತಿದ್ದ ಛಾಯಾಗ್ರಾಹಕ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳಿಗೆ ಅಮೆರಿಕ ಪ್ರವೇಶ ನಿರಾಕರಿಸಲಾಗಿದೆ.

ವೀಸಾ ಸಮಸ್ಯೆಗಳನ್ನು ಪರಿಹರಿಸಲು ಫಿಫಾ ಪ್ರಯತ್ನಿಸುತ್ತಿದ್ದರೂ, ಅಮೆರಿಕ ಸರ್ಕಾರದ ನಿರ್ಧಾರಗಳನ್ನು ಬದಲಾಯಿಸುವ ಅಧಿಕಾರ ತನ್ನಲ್ಲಿಲ್ಲ ಎಂದು ಇನ್ಫಾಂಟಿನೊ ಈ ವಾರ ಸ್ಪಷ್ಟಪಡಿಸಿದ್ದಾರೆ.

'ಸರ್ಕಾರಗಳು ಮತ್ತು ಪೊಲೀಸ್ ಪಡೆಗಳನ್ನು ನಿಯಂತ್ರಿಸಬಲ್ಲ ವಿಶ್ವದ ರಾಜರು ನಾವು ಅಲ್ಲ. ಅವುಗಳ ಅಧಿಕಾರವನ್ನು ಗೌರವಿಸಬೇಕು' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಜೌಬ್ ಅವರ ವೀಸಾ ಅರ್ಜಿಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಇಲಾಖೆ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕಳೆದ ವರ್ಷ ಫೆಲೆಸ್ತೀನ್ ಪಾಸ್‌ಪೋರ್ಟ್ ಹೊಂದಿರುವವರು ಹಾಗೂ ಫೆಲೆಸ್ತೀನ್ ಪ್ರಾಧಿಕಾರದ ಉದ್ಯೋಗಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ಜಾರಿಗೆ ತಂದಿತ್ತು.

ಕಳೆದ ಸೆಪ್ಟೆಂಬರ್‌ ನಲ್ಲಿ ಫೆಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಪ್ರಯಾಣಿಸಲು ಪಡೆದಿದ್ದ ಅಮೆರಿಕ ವೀಸಾವನ್ನೂ ರದ್ದುಗೊಳಿಸಲಾಗಿತ್ತು.

ಇದೇ ವೇಳೆ, ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತು ಪ್ರದೇಶಗಳ ತಂಡಗಳಿಗೆ ರಾಷ್ಟ್ರೀಯ ಲೀಗ್‌ ನಲ್ಲಿ ಆಡಲು ಅವಕಾಶ ನೀಡುವ ಮೂಲಕ ಇಸ್ರೇಲ್ ಅಂತರರಾಷ್ಟ್ರೀಯ ಕ್ರೀಡಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ರಜೌಬ್ ಹಾಗೂ ಇತರ ಫೆಲೆಸ್ತೀನ್ ಫುಟ್‌ಬಾಲ್ ಅಧಿಕಾರಿಗಳು ದೀರ್ಘಕಾಲದಿಂದ ಆರೋಪಿಸಿದ್ದಾರೆ.

ಇಸ್ರೇಲ್ ವಿರುದ್ಧ ನಿರ್ಬಂಧ ವಿಧಿಸುವಂತೆ ಫಿಫಾವನ್ನು ಅವರು ಆಗ್ರಹಿಸಿದ್ದಾರೆ. ಫೆಲೆಸ್ತೀನ್ ಆಟಗಾರರ ಸಂಚಾರದ ಮೇಲಿನ ನಿರ್ಬಂಧಗಳು ಹಾಗೂ ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.

ಫೆಲೆಸ್ತೀನ್ ಫುಟ್‌ಬಾಲ್ ಅಸೋಸಿಯೇಷನ್‌ ನ ಪ್ರಕಾರ, ಗಾಝಾದಲ್ಲಿನ ಶೇ 80ರಷ್ಟು ಕ್ರೀಡಾ ಸೌಲಭ್ಯಗಳು ಹಾನಿಗೊಳಗಾಗಿವೆ ಅಥವಾ ಸಂಪೂರ್ಣ ನಾಶವಾಗಿವೆ. ಅಲ್ಲದೆ, ಕನಿಷ್ಠ 565 ಆಟಗಾರರು ಯುದ್ಧದಲ್ಲಿ ಮೃತಪಟ್ಟಿದ್ದಾರೆ.

ಕಳೆದ ತಿಂಗಳು ಫಿಫಾ ಅಧ್ಯಕ್ಷರ ಸೂಚನೆಯ ಮೇರೆಗೆ ಇಸ್ರೇಲ್ ಫುಟ್‌ಬಾಲ್ ಫೆಡರೇಶನ್ ಮುಖ್ಯಸ್ಥರೊಂದಿಗೆ ಹಸ್ತಲಾಘವ ಮಾಡಲು ರಜೌಬ್ ನಿರಾಕರಿಸಿದ್ದರು. 'ಇಂತಹ ಸಾಂಕೇತಿಕ ನಡೆಗಳು ಗಾಯಗಳನ್ನು ಗುಣಪಡಿಸುವುದಿಲ್ಲ. ಬದಲಿಗೆ ಇಸ್ರೇಲ್‌ನ ಕ್ರಮಗಳನ್ನು ಸಮರ್ಥಿಸುವ ಪ್ರಯತ್ನವಾಗುತ್ತದೆ' ಎಂದು ಅವರು ಹೇಳಿದ್ದರು.

2018ರಲ್ಲಿ ರಷ್ಯಾ ವಿಶ್ವಕಪ್ ಆತಿಥ್ಯ ವಹಿಸಿದ್ದಾಗ, ಪಂದ್ಯಾವಳಿಗೆ ಆಹ್ವಾನಿತರಾಗಿದ್ದ ಪ್ರತಿನಿಧಿಗಳ ಮೇಲೆ ಇಂತಹ ವೀಸಾ ನಿರ್ಬಂಧಗಳನ್ನು ವಿಧಿಸಿರಲಿಲ್ಲ ಎಂಬುದನ್ನೂ ರಜೌಬ್ ಉಲ್ಲೇಖಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries