ಕೊಚ್ಚಿ : ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್‍ನಿಂದ (ಸಿಎಂಆರ್‍ಎಲ್) ಭಾರಿ ಮೊತ್ತದ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಟಿ. ಅವರು ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮುಂದೆ ಗುರುವಾರ ವಿಚಾರಣೆಗೆ ಹಾಜರಾಗಿದ್ದರು.
ಇಲ್ಲಿನ ಇ.ಡಿ ಕಚೇರಿಗೆ ವೀಣಾ ಅವರು ಬೆಳಿಗ್ಗೆ 9.20ಕ್ಕೆ ಬಂದಿದ್ದು, ಸುಮಾರು 9 ಗಂಟೆ ವಿಚಾರಣೆ ಎದುರಿಸಿದರು. ಜೂನ್ 29ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ವೀಣಾ ಅವರಿಗೆ ಈ ಹಿಂದೆ ತಿಳಿಸಲಾಗಿತ್ತು. ಆದರೆ, ನಿಗದಿತ ದಿನಾಂಕಕ್ಕೆ ಮುಂಚಿತವಾಗಿ ವಿಚಾರಣೆ ನಡೆಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
'ವೀಣಾ ಅವರ ಹಿಂದಿನ ಹೇಳಿಕೆಗಳು ಮತ್ತು ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳನ್ನು ವಿಶ್ಲೇಷಿಸಿದ ಬಳಿಕ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಪರಿಗಣಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ವೀಣಾ ಅವರ ವಿರುದ್ಧ ಜೂನ್ 17ರಂದು ದೂರು ದಾಖಲಾಗಿತ್ತು.
ಸಿಎಂಆರ್‍ಎಲ್ ಯಾವುದೇ ಸೇವೆಗಳನ್ನು ಪಡೆಯದೆ ವೀಣಾ ಅವರಿಗೆ ಸೇರಿದ ಐಟಿ ಸೇವಾ ಸಂಸ್ಥೆ ಎಕ್ಸಾಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍ಗೆ (ಇಎಸ್‍ಪಿಎಲ್) ?2.78 ಕೋಟಿ ಪಾವತಿಸಿದೆ ಎಂಬ ಆರೋಪ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.

