ನವದೆಹಲಿ: ಭಾರತದ ಧ್ವಜ ಹೊಂದಿರುವ ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಹೊತ್ತ 'ದಿಶಾ' ಹಡಗು ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿಯನ್ನು ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ದಿಶಾ' ಹಡಗಿನಲ್ಲಿ 62,370 ಮೆಟ್ರಿಕ್ ಟನ್ ಎಲ್‌ಎನ್‌ಜಿ ಸಾಗಾಟ ಮಾಡಲಾಗುತ್ತಿತ್ತು.
ಜೂನ್ 18ಕ್ಕೆ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
'ದಿಶಾ' ಹಡಗು ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟುವ ಉದ್ದೇಶದಿಂದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಕಾರ್ಯಪ್ರವೃತ್ತವಾಗಿತ್ತು. ಕಳೆದ 96 ಗಂಟೆಯಲ್ಲಿ 12,737 ಕರೆ, 28,299 ಇ-ಮೇಲ್ ಮೂಲಕ ನಾವಿಕರು ಮತ್ತು ಅವರ ಕುಟುಂಬದವರೊಂದಿಗೆ ಸಂವಹನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದ ನಂತರ 3,587 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಕಳೆದ 96 ಗಂಟೆಗಳಲ್ಲಿ 50 ನಾವಿಕರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ ಎಂದು ಹೇಳಿದ್ದಾರೆ.

