ನವದೆಹಲಿ: ಪರೀಕ್ಷಾ ಅಕ್ರಮ, ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಸರ್ಕಾರದ ಉತ್ತರದಾಯಿತ್ವಕ್ಕೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ದೆಹಲಿಯ ಜಂತರ್‌ಮಂತರ್‌ನಲ್ಲಿ ಶನಿವಾರ ನಡೆಸಿದ ಎರಡನೇ ಪ್ರತಿಭಟನೆಯಲ್ಲಿ, ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಭಾಗಿಯಾಗಿದ್ದರು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ನೀಡಿದ್ದ ಕರೆ ಮೇರೆಗೆ ಪ್ರತಿಭಟನಕಾರರು, ಚಮಚದಿಂದ ತಟ್ಟೆಗೆ ಬಡಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಬರಹಗಳಿದ್ದ ಭಿತ್ತಿಫಲಕಗಳನ್ನು ಅವರು ಪ್ರದರ್ಶಿಸಿದರು.
'ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡುವುದಾಗಿ' ದೀಪ್ಕೆ ತಿಳಿಸಿದರು. ಹೋರಾಟಗಾರ ಸೋನಂ ವಾಂಗ್ಚೂಕ್ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನಕಾರರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರಣ ಭಾರಿ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ರತಿಭಟನೆ ಮುಂದುವರಿಕೆಗೆ ಅನುಮತಿ
ನಿರಾಕರಣೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಪ್ರತಿಭಟನಾ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಅಭಿಜೀತ್ ದೀಪ್ಕೆ ಹೇಳಿದ್ದರು. ಆದರೆ ಪ್ರತಿಭಟನೆ ಮುಂದುವರಿಸಲು ದೆಹಲಿ ಪೊಲೀಸರು ಅನುಮತಿ ನೀಡಲಿಲ್ಲ.
'ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಿ. ಪ್ರತಿಭಟನೆ ಅವಧಿ ವಿಸ್ತರಣೆಗೆ ಪೊಲೀಸರು ಅವಕಾಶ ನೀಡುತ್ತಾರೆ' ಎಂದು ದೀಪ್ಕೆ ಕರೆ ನೀಡಿದ್ದರು. ಆದರೆ ಸ್ಥಳದಿಂದ ತೆರಳುವಂತೆ ಪೊಲೀಸರು ಸಿಜೆಪಿ ಬೆಂಬಲಿಗರಿಗೆ ಸೂಚಿಸಿದರು.
'ಮಾತುಕತೆಗೆ ಮುಕ್ತ ಅವಕಾಶವಿದೆ. ಆದರೆ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬುವುದು ನಮ್ಮ ಷರತ್ತು. ಪ್ರತಿಭಟನಕಾರರನ್ನು ಬಂಧಿಸುವುದಾದರೆ ಮೊದಲು ನನ್ನ ಬಂಧನವಾಗಬೇಕು' ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಜೆಪಿ ಬೆಂಬಲಿಗರು ಭಾಗಿಯಾಗಿದ್ದರು - ಪಿಟಿಐ ಚಿತ್ರ
ಪ್ರತಿಭಟನಕಾರರೊಬ್ಬರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಚಿತ್ರವಿದ್ದ ಭಿತ್ತಿಫಲಕಕ್ಕೆ ಚಮಚದಿಂದ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು - ಪಿಟಿಐ ಚಿತ್ರ
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಜೆಪಿ ಬೆಂಬಲಿಗರು ಭಾಗಿಯಾಗಿದ್ದರು - ಪಿಟಿಐ ಚಿತ್ರ

