ನವದೆಹಲಿ: ಮುಂಬರಲಿರುವ 'ನೀಟ್-ಯುಜಿ' ಮರು ಪರೀಕ್ಷೆಗೆ ಹೆಚ್ಚುವರಿ 'ರಫ್ ಶೀಟ್', ಹೆಚ್ಚುವರಿ ಪರೀಕ್ಷಾ ಅವಧಿ ಸೇರಿದಂತೆ ಹಲವು ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರಕಟಿಸಿದೆ.
ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಇದೇ 21ರಂದು ನಡೆಯಲಿದೆ.
ಎನ್‌ಟಿಎ ಪ್ರಕಾರ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರವರೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು ಪರೀಕ್ಷಾ ಅವಧಿ 195 ನಿಮಿಷಗಳು. ಈ ಹಿಂದೆ 180 ನಿಮಿಷಗಳಿದ್ದ ಪರೀಕ್ಷಾ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲಾಗಿದೆ.
ಪರೀಕ್ಷೆಯ ಪ್ರಾರಂಭ ಮತ್ತು ಅಂತ್ಯದಲ್ಲಿ ಮೇಲ್ವಿಚಾರಣಾ ಕಾರ್ಯಗಳನ್ನು ನಿರ್ವಹಿಸಲೂ ಈ ಹೆಚ್ಚುವರಿ ಅವಧಿ ಉಪಯುಕ್ತವಾಗಲಿದೆ ಎಂದು ಎನ್‌ಟಿಎ ತಿಳಿಸಿದೆ.
ಹೆಚ್ಚುವರಿ ಎರಡು 'ರಫ್‌ಶೀಟ್': ಪರೀಕ್ಷಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗುತ್ತಿದ್ದ ರಫ್ ಶೀಟ್‌ಗಳನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಲಾಗಿದೆ. ಪ್ರಶ್ನೆ ಪತ್ರಿಕೆ ಬುಕ್‌ಲೆಟ್‌ನ ಮೊದಲ ಪುಟದ ನಂತರ ಎರಡು ಹಾಗೂ ಕೊನೆಯಲ್ಲಿ ಎರಡು ರಫ್ ಶೀಟ್‌ಗಳನ್ನು ಒದಗಿಸಲಾಗುತ್ತದೆ. ಅಭ್ಯರ್ಥಿಗಳು ಲೆಕ್ಕ ಮತ್ತು ಇತರ ತಾರ್ಕಿಕ ಕ್ರಿಯೆಗೆ ಈ ಹೆಚ್ಚುವರಿ ಸ್ಥಳವನ್ನು ಬಳಸಿಕೊಳ್ಳಬಹುದು ಎಂದು ಎನ್‌ಟಿಎ ವಿವರಿಸಿದೆ.
ಮೊದಲು ಪ್ರಶ್ನೆ ಪತ್ರಿಕೆಯ ಬುಕ್‌ಲೆಟ್ ಕೊನೆಯಲ್ಲಿ ಮಾತ್ರ ಎರಡು ರಫ್‌ಶೀಟ್‌ಗಳನ್ನು ನೀಡಲಾಗುತ್ತಿತ್ತು. ಇದು ಬಲಗೈನಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಅನುಕೂಲಕರವಾಗಿತ್ತು. ಎಡಗೈ ಪರೀಕ್ಷಾರ್ಥಿಗಳಿಗೆ ರಫ್‌ವರ್ಕ್ ಮಾಡಲು ಕಷ್ಟವಾಗುತ್ತಿತ್ತು. ಈಗ ಆರಂಭದಲ್ಲೂ ಎರಡು ರಫ್‌ಶೀಟ್‌ಗಳನ್ನು ನೀಡುವುದರಿಂದ ಎಡಗೈ ಪರೀಕ್ಷಾರ್ಥಿಗಳಿಗೂ ಉಪಯುಕ್ತವಾಗಲಿದೆ. ಒಟ್ಟಾರೆ ಪರೀಕ್ಷಾರ್ಥಿಗಳಲ್ಲಿ ಶೇ 10ರಷ್ಟು ಎಡಗೈ ಅಭ್ಯರ್ಥಿಗಳಾಗಿದ್ದಾರೆ ಎಂದು ಅದು ತಿಳಿಸಿದೆ.
ಮೇ 3ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇರೆಗೆ ಎನ್‌ಟಿಎ ರದ್ದುಪಡಿಸಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.

