ಲಕ್ನೊ: ಹಲವು ರಾಷ್ಟ್ರಗಳು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವ ನಡುವೆಯೂ ಭಾರತವು ಪ್ರಮುಖ ಆರ್ಥಿಕ ಶಕ್ತಿಯಾಗಿ ಕ್ಷಿಪ್ರವಾಗಿ ಬೆಳೆಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, '2025-26ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ 7.7ರಷ್ಟು ಬೆಳವಣಿಗೆ ಸಾಧಿಸಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಈ ಬೆಳವಣಿಗೆಯ ವೇಗ ಮತ್ತಷ್ಟು ಹೆಚ್ಚಾಗಿ ಶೇ 7.8ಕ್ಕೆ ತಲುಪಿದೆ. ಇದು ಕಳೆದ 12 ವರ್ಷಗಳಲ್ಲಿ ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರದ ಮಂತ್ರದ ಮೂಲಕ ನಿರ್ಮಾಣವಾಗಿರುವ ಆರ್ಥಿಕ ಸದೃಢತೆ ಹಾಗೂ ಸಾಮರ್ಥ್ಯದ ಪ್ರತೀಕವಾಗಿದೆ' ಎಂದು ಹೇಳಿದ್ದಾರೆ.
'ಹಲವು ರಾಷ್ಟ್ರಗಳು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ' ಎಂದೂ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಆರ್ಥಿಕ ಪ್ರಗತಿಯನ್ನು ಸ್ಥಿರತೆ, ನಂಬಿಕೆ, ಸುಸ್ಥಿರತೆ ಹಾಗೂ ವಿಶ್ವಾಸಾರ್ಹತೆಯೊಂದಿಗೆ ಮಿಳಿತಗೊಳಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
'ರಾಷ್ಟ್ರ ನಿರ್ಮಾಣದತ್ತ ಅವರ ಅಚಲ ಬದ್ಧತೆ, ಆವಿಷ್ಕಾರ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡಿದ ದೂರದೃಷ್ಟಿಯ ಫಲವಾಗಿ, ಜಾಗತಿಕ ಮಟ್ಟದಲ್ಲಿ ಎದುರಾದ ಅಭೂತಪೂರ್ವ ಸವಾಲುಗಳ ನಡುವೆಯೂ ಭಾರತವು ವಿಶ್ವಾಸಭರಿತ, ಸದೃಢ ಹಾಗೂ ಜಾಗತಿಕವಾಗಿ ಗೌರವಿಸಲ್ಪಡುವ ಆರ್ಥಿಕ ಶಕ್ತಿಯಾಗಿ ರೂಪಾಂತರಗೊಂಡಿದೆ' ಎಂದು ಅವರು ಹೇಳಿದ್ದಾರೆ.
'ವಿಕಸಿತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ದೇಶ ಮುನ್ನಡೆಯುತ್ತಿದ್ದು, ಈ ಪ್ರಗತಿಯ ಪಯಣವು ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಮತ್ತಷ್ಟು ಬಲಪಡಿಸಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

