ಕೋಲ್ತತ್ತ: ಪಶ್ಚಿಮ ಬಂಗಾಳದ ಪ್ರಮುಖ ಆರ್ಕಷಣೆಯಾಗಿದ್ದ ಜನಪ್ರಿಯ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಬೃಹತ್ ಪ್ರತಿಮೆಯನ್ನು ಸುರಕ್ಷತಾ ಕಾರಣಗಳನ್ನು ನೀಡಿ ಸೋಮವಾರ ತೆರವುಗೊಳಿಸಲಾಗಿದೆ.
ಮೆಸ್ಸಿ ಅವರು ಫಿಫಾ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿರುವಂತೆ ಬಿಂಬಿಸುವ 70 ಅಡಿ ಎತ್ತರದ ಈ ಚಿನ್ನದ ಬಣ್ಣದ ಪ್ರತಿಮೆಯನ್ನು ಕ್ರೇನ್ ಮತ್ತು ಹಗ್ಗಗಳನ್ನು ಬಳಸಿ ಕೆಳಗಿಸಲಾಗಿದ್ದು, ನಂತರ ಟ್ರಕ್‌ನಲ್ಲಿ ಸಾಗಿಸಲಾಗಿದೆ.
'ಪ್ರತಿಮೆಯು ಗಾಳಿಗೆ ತೂಗಾಡುತ್ತಿದೆ ಎಂದು ಸ್ಥಳೀಯರು ದೂರಿತ್ತ ನಂತರ ಸೋಮವಾರ ಮಧ್ಯಾಹ್ನ ಅದನ್ನು ತೆರವುಗೊಳಿಸಲಾಯಿತು' ಎಂದು ಪಶ್ಚಿಮ ಬಂಗಾಳದ ಶಾಸಕ ಶರದ್ವತ್ ಮುಖರ್ಜಿ ಅವರು ತಿಳಿಸಿದ್ದಾರೆ.
ಸೂಕ್ತ ಸ್ಥಳ ಸಿಗುವವರೆಗೆ ಪ್ರತಿಮೆಯನ್ನು ಸರ್ಕಾರಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಿದ್ದ ಮೆಸ್ಸಿ, ಕೋಲ್ಕತ್ತದ ವಿಐಪಿ ರಸ್ತೆಯ ಲೇಕ್‌ಟೌನ್‌ನ ಶ್ರೀಭೂಮಿಯಲ್ಲಿ ನಿಲ್ಲಿಸಿದ್ದ ತಮ್ಮ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ನಂತರ ನಡೆದ 'ಗೋಟ್ ಕಪ್' ಪ್ರದರ್ಶನ ಪಂದ್ಯದಲ್ಲಿಯೂ ಭಾಗವಹಿಸಿದ್ದರು.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಹೀನಾಯವಾಗಿ ಸೋತಿತ್ತು. ಮೊದಲ ಬಾರಿ ಅಧಿಕಾರಕ್ಕೆ ಬಂದ ಬಿಜೆಪಿಯು ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಹೊರಟಿದೆ.
ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಂದ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ರದ್ದುಪಡಿಸುತ್ತಾ ಬಂದಿದ್ದು, ಅವುಗಳಲ್ಲಿ ಮೆಸ್ಸಿ ಪ್ರತಿಮೆ ತೆರವು ಒಂದಾಗಿದೆ ಎಂದು ವರದಿಯಾಗಿದೆ.

