ನವದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಮೆಟ್ರೊ ನಿಲ್ದಾಣದ ಬಳಿಯ ಬಹುಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 30ರಂದು ನಡೆದ ಘಟನೆಯಲ್ಲಿ ಆರು ಜನರು ಮೃತಪಟ್ಟಿದ್ದರು. ಎಂಟು ಮಂದಿ ಗಾಯಗೊಂಡಿದ್ದರು.
ಹಲವರು ಕಟ್ಟಡ ಅವಶೇಷದಡಿ ಸಿಲುಕಿಕೊಂಡಿದ್ದರು. ಅವರನ್ನು ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿತ್ತು.
ಕಟ್ಟಡದ ಮಾಲೀಕನಾಗಿರುವ ಕರ್ಮವೀರ್ ಅವರು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಅವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಟ್ಟಡದ ನೆಲಮಹಡಿಯಲ್ಲಿ ಕೋಚಿಂಗ್ ಕೇಂದ್ರ, ಮೇಲಿನ ಮೂರು ಅಂತಸ್ತುಗಳಲ್ಲಿ ಕೆಫೆ, ಕಚೇರಿಗಳಿದ್ದವು. ಮೂರನೇ ಮಹಡಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತಿತ್ತು. ಅದು ಸಂಪೂರ್ಣವಾಗಿ ಕುಸಿದಿದೆ ಎಂದು ಹೇಳಿದ್ದಾರೆ.

