ಲಖನೌ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಮುಸ್ಲಿಂ ವಿದ್ವಾಂಸರ ಒತ್ತಾಯವನ್ನು 'ಇಬ್ಬಗೆ ನೀತಿ' ಎಂದು ಟೀಕಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗೋವು ಎಂದಿಗೂ ದೇಶದ ಮಾತೆಯಾಗಿಯೇ ಇತ್ತು, ಅದನ್ನು ಅಧಿಕೃತವಾಗಿ ಘೋಷಿಸಬೇಕಿಲ್ಲ ಎಂದು ಹೇಳಿದ್ದಾರೆ.
'ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಕೆಲವು ಮೌಲಾನಾಗಳು ಒತ್ತಾಯ ಮಾಡಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಗೋವು ಈಗಾಗಲೇ ನಮ್ಮ ತಾಯಿ. ಅದರೊಂದಿಗೆ ನಮ್ಮ ಸಂಬಂಧ ಜನ್ಮಾಂತರಗಳನ್ನು ಮೀರಿದ್ದು. ಮಗು ಹಾಗೂ ತಾಯಿಯ ಸಂಬಂಧ ಸಾಬೀತು ಪಡಿಸಲು ಯಾವುದೇ ಅಧಿಕೃತ ಘೋಷಣೆ ಬೇಕಿಲ್ಲ' ಎಂದು ಅವರು ಬಿಜ್ನೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
'ಒಂದು ಕಡೆ ಗೋಹತ್ಯೆಗೆ ನೀವೇ ಬೆಂಬಲ ನೀಡುತ್ತೀರಿ, ಇನ್ನೊಂದೆಡೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎನ್ನುತ್ತೀರಿ, ಇದು ಇಬ್ಬಗೆ ನಿಲುವು' ಎಂದು ಹೇಳಿದ್ದಾರೆ.
ಇದೇ ವೇಳೆ ಗೋವಧೆ ಮಾಡಿದರೆ ಅದರ ಪರಿಣಾಮವನ್ನು ಅವರ ತಲೆಮಾರುಗಳು ಅನುಭವಿಸಬೇಕು, ಆ ರೀತಿ ನಮ್ಮ ಸರ್ಕಾರ ಶಿಕ್ಷಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

