HEALTH TIPS

ದೀದಿ ಸಭೆಗೆ 60 ಶಾಸಕರು ಗೈರು; ಟಿಎಂಸಿಯಲ್ಲಿ ಭಿನ್ನಮತ ಸ್ಫೋಟ: ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದ ಮಮತಾ!

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡಿರುವ ತೃಣಮೂಲ ಕಾಂಗ್ರೆಸ್ (TMC expels MLAs) ಪಕ್ಷದಲ್ಲಿ ಈಗ ಭಿನ್ನಮತ ಭಾಹ್ಯರೂಪಕ್ಕೆ ಬಂದಿದೆ. ಪಕ್ಷದ ಆಂತರಿಕ ಕಲಹ ತಾರಕಕ್ಕೇರಿದ್ದು, ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಇಬ್ಬರು ಪ್ರಮುಖ ಶಾಸಕರಾದ ಸಂದೀಪನ್ ಸಹಾ ಮತ್ತು ರಿತಬ್ರತಾ ಬ್ಯಾನರ್ಜಿ ಅವರನ್ನು ಟಿಎಂಸಿ ಸೋಮವಾರ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಿದೆ.

ಪಕ್ಷದ ಸುಪ್ರೀಮೋ ಮಮತಾ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಲಿಘಾಟ್ ನಿವಾಸದಲ್ಲಿ ಭಾನುವಾರ ನಡೆದ ಮಹತ್ವದ ಶಾಸಕರ ಸಭೆಗೆ ಇವರಿಬ್ಬರು ಗೈರಾಗಿದ್ದರು. ಇದರ ಬೆನ್ನಲ್ಲೇ ಟಿಎಂಸಿ ಹೈಕಮಾಂಡ್ ಈ ಕಠಿಣ ಕ್ರಮ ಕೈಗೊಂಡಿದೆ. ಉಚ್ಚಾಟಿತ ಇಬ್ಬರು ನಾಯಕರು ಪಕ್ಷದ ಹಿತಾಸಕ್ತಿಗೆ ಧಕ್ಕೆ ತರುವಂತಹ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರು ಎಂದು ಟಿಎಂಸಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮಮತಾ ಕರೆದಿದ್ದ ಸಭೆಗೆ 60 ಶಾಸಕರು ಗೈರು!

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ನಂತರ ಪಕ್ಷವನ್ನು ಮರುಸಂಘಟಿಸಲು ಮಮತಾ ಅವರು ಭಾನುವಾರ ಶಾಸಕರ ತುರ್ತು ಸಭೆ ಕರೆದಿದ್ದರು. ಆದರೆ, ಒಟ್ಟು 80 ಟಿಎಂಸಿ ಶಾಸಕರ ಪೈಕಿ ಕೇವಲ 20 ಶಾಸಕರು ಮಾತ್ರ ಈ ಸಭೆಗೆ ಹಾಜರಾಗಿದ್ದು, ಬರೋಬ್ಬರಿ 60 ಶಾಸಕರು ಸಭೆಯಿಂದ ದೂರ ಉಳಿದಿರುವುದು ದೀದಿ ಚಾವಣಿಯಲ್ಲಿ ಆತಂಕ ಮೂಡಿಸಿದೆ. ಕಳೆದ ವಾರ ಸೋನಾರ್​ಪುರದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಉಂಟಾದ ಗೊಂದಲದಿಂದಾಗಿ ಹಲವು ಶಾಸಕರು ಬರಲು ಸಾಧ್ಯವಾಗಿಲ್ಲ ಎಂದು ಟಿಎಂಸಿ ಸಮರ್ಥಿಸಿಕೊಂಡಿದೆ. ಆದರೆ, ಆಂತರಿಕ ಮೂಲಗಳ ಪ್ರಕಾರ ಪಕ್ಷದ ನಾಯಕತ್ವದ ವಿರುದ್ಧ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಲೀಡರ್‌ಶಿಪ್ ಪ್ರಶ್ನಿಸಿದ್ದ ಸಂದೀಪನ್ ಸಹಾ

ಉಚ್ಚಾಟನೆಗೊಂಡ ಎಂಟಾಲಿ ಕ್ಷೇತ್ರದ ಶಾಸಕ ಸಂದೀಪನ್ ಸಹಾ (ಮಾಜಿ ಟಿಎಂಸಿ ಶಾಸಕ ಸ್ವರ್ಣ ಕಮಲ್ ಸಹಾ ಅವರ ಪುತ್ರ) ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು 34,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಸಭೆಗೆ ಗೈರಾದ ಕುರಿತು ಸುದ್ಧಿಸಂಸ್ಥೆ ANI ಜೊತೆಗೆ ಮಾತನಾಡಿದ್ದ ಸಂದೀಪನ್ ಸಹಾ, ಪಕ್ಷದ ನಾಯಕತ್ವದ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.
15 ವರ್ಷಗಳ ಕಾಲ ಆಡಳಿತ ನಡೆಸಿದರೂ ಪಕ್ಷದ ನಾಯಕ, ಉಪನಾಯಕ ಹಾಗೂ ಚೀಫ್ ವಿಪ್ ಆಯ್ಕೆಯ ನಿರ್ಣಯವನ್ನು ಸೂಕ್ತ ನಿಯಮಾವಳಿಗಳನ್ನು ಪಾಲಿಸದೆ ವಿಧಾನಸಭೆಗೆ ಸಲ್ಲಿಸಲಾಗಿದೆ. ಪ್ರೋಟೋಕಾಲ್ ಪಾಲಿಸದ ಕಾರಣ ಅದನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಈಗ ಯಾವುದೇ ಪ್ರಕ್ರಿಯೆಗಳನ್ನು ಪರಿಶೀಲಿಸದೆ ಮತ್ತೊಂದು ಸಭೆ ಕರೆಯಲಾಗಿದೆ. ಇದು ಎಷ್ಟು ಸರಿ ಎಂದು ಸಂದೀಪನ್ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ, ಅಭಿಷೇಕ್ ಬ್ಯಾನರ್ಜಿ ಅವರ ನಕಲಿ ಸಹಿ ತನಿಖೆಯ ಕುರಿತೂ ಅವರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮಾಜಿ ಸಂಸದ ರಿತಬ್ರತಾಗೂ ಶಾಕ್

ಉಚ್ಚಾಟನೆಗೊಂಡ ಮತ್ತೊಬ್ಬ ನಾಯಕ ರಿತಬ್ರತಾ ಬ್ಯಾನರ್ಜಿ ಉಲುಬೇರಿಯಾ ಪುರ್ಬಾ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಚುನಾವಣೆಯಲ್ಲಿ ಬಿಜೆಪಿಯ ರುದ್ರ ಪ್ರಸಾದ್ ಬ್ಯಾನರ್ಜಿ ಅವರನ್ನು 11,800 ಮತಗಳಿಂದ ಸೋಲಿಸಿದ್ದರು. ಮಾಜಿ ರಾಜ್ಯಸಭಾ ಸಂಸದರಾಗಿದ್ದ ರಿತಬ್ರತಾ ಅವರು 2017 ರಲ್ಲಿ ಸಿಪಿಐ(ಎಂ) ಪಕ್ಷವನ್ನು ತೊರೆದು ಟಿಎಂಸಿ ಸೇರಿದ್ದರು. ಕಮಲ ಪಾಳಯದ ಆರ್ಭಟದ ನಡುವೆಯೂ ಗೆದ್ದು ಬಂದಿದ್ದ ಈ ಇಬ್ಬರು ಪ್ರಮುಖ ನಾಯಕರ ಉಚ್ಚಾಟನೆ ಟಿಎಂಸಿ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.
ಸದ್ಯ ಅಧಿಕಾರ ಕಳೆದುಕೊಂಡು ಕಂಗಾಲಾಗಿರುವ ಟಿಎಂಸಿಯಲ್ಲಿ ಶಾಸಕರ ಬಂಡಾಯದ ಹೊಗೆ ಆಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಶಾಸಕರು ದೀದಿಗೆ ಕೈಕೊಟ್ಟು ಆಡಳಿತಾರೂಢ ಬಿಜೆಪಿಯತ್ತ ಮುಖ ಮಾಡಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries