ನವದೆಹಲಿ: ಕಳೆದ ವರ್ಷ ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ (Pahalgam) ನಡೆದಿದ್ದ ಭೀಕರ ಭಯೋತ್ಪಾದಕ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಮಹತ್ವದ ತಾಂತ್ರಿಕ ಸುಳಿವು ಲಭ್ಯವಾಗಿದೆ.
ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಉಗ್ರರು ಬಳಸುತ್ತಿದ್ದ ಎರಡು ಸ್ಮಾರ್ಟ್‌ಫೋನ್‌ಗಳ ಡಿಜಿಟಲ್ ಹೆಜ್ಜೆಗುರುತುಗಳನ್ನು ಬೆನ್ನಟ್ಟಿರುವ ತನಿಖಾಧಿಕಾರಿಗಳು, ಅದರ ಮೂಲವನ್ನು ಪತ್ತೆಹಚ್ಚಿದ್ದಾರೆ. ಈ ಪೈಕಿ ಒಂದು ಮೊಬೈಲ್‌ಗೆ ಪಾಕಿಸ್ತಾನದ ಕರಾಚಿ ಮೂಲದ ಪ್ರಮುಖ ಇಸ್ಲಾಮಿಕ್ ಬ್ಯಾಂಕ್‌ವೊಂದು ಹಣಕಾಸಿನ ನೆರವು ನೀಡಿರುವುದು ಬೆಳಕಿಗೆ ಬಂದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮೊಬೈಲ್ ಹಿಸ್ಟರಿ ಬಿಚ್ಚಿಟ್ಟ ರಹಸ್ಯಗಳು
2025ರ ಜುಲೈ 28ರಂದು ಕಾಶ್ಮೀರದ ದಾಚಿಗಾಮ್ ಅರಣ್ಯ ಪ್ರದೇಶದ ಮುಲ್ನಾರ್ ಮಹಾದೇವ್ ಎಂಬಲ್ಲಿ ನಡೆದ ಭೀಕರ ಕಾಳಗದಲ್ಲಿ ಭದ್ರತಾ ಪಡೆಗಳು ಫೈಸಲ್ ಜಟ್, ಹಬೀಬ್ ತಾಹಿರ್ ಮತ್ತು ಹಮ್ಜಾ ಅಫ್ಘಾನಿ ಎಂಬ ಮೂವರು ಉಗ್ರರನ್ನು ಹೊಡೆದುರುಳಿಸಿದ್ದವು. ಅವರಿಂದ ಜಪ್ತಿ ಮಾಡಲಾಗಿದ್ದ ಎರಡು ಶಿಯೋಮಿ (Xiaomi) ಕಂಪನಿಯ ರೆಡ್‌ಮಿ ಫೋನ್‌ಗಳ ತಪಾಸಣೆ ನಡೆಸಿದಾಗ ಅಂತಾರಾಷ್ಟ್ರೀಯ ಮಟ್ಟದ ಒಳಸಂಚು ಪತ್ತೆಯಾಗಿದೆ.
ಶಿಯೋಮಿ ಗ್ಲೋಬಲ್ ಸಂಸ್ಥೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಉಗ್ರರ ಬಳಿಯಿದ್ದ 'ರೆಡ್‌ಮಿ 9T' ಫೋನ್ ಅನ್ನು 2021ರ ಜನವರಿಯಲ್ಲೇ ಪಾಕಿಸ್ತಾನದ 'ಟೆಕ್ ಸಿರಾಟ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿ ಕಾನೂನುಬದ್ಧವಾಗಿ ಆಮದು ಮಾಡಿಕೊಂಡಿತ್ತು. ಈ ಆಮದು ಪ್ರಕ್ರಿಯೆಗೆ ಕರಾಚಿಯ ಶಹ್ರಾ-ಇ-ಫೈಸಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ 'ಫೈಸಲ್ ಬ್ಯಾಂಕ್ ಲಿಮಿಟೆಡ್' ಹಣಕಾಸು ನೆರವು ಒದಗಿಸಿತ್ತು. ಅಚ್ಚರಿಯ ವಿಷಯವೆಂದರೆ, 2021ರಲ್ಲೇ ಆಮದಾಗಿದ್ದ ಈ ಫೋನ್ ಅನ್ನು, 2025ರ ಏಪ್ರಿಲ್ 22ರಂದು ಪಹಲ್ಗಾಮ್ ದಾಳಿ ನಡೆಯುವವರೆಗೂ ಒಮ್ಮೆಯೂ ಸ್ವಿಚ್ ಆನ್ ಮಾಡಿರಲಿಲ್ಲ. ಅಂದರೆ, ಲಷ್ಕರ್-ಎ-ತೊಯ್ಬಾ (LeT) ಉಗ್ರರಿಗೆ ನೀಡುವ ಉದ್ದೇಶದಿಂದಲೇ ಈ ಮೊಬೈಲ್ ಅನ್ನು ನಾಲ್ಕು ವರ್ಷಗಳ ಕಾಲ ಅತ್ಯಂತ ರಹಸ್ಯವಾಗಿ ಕಾಯ್ದಿರಿಸಲಾಗಿತ್ತು ಎಂಬುದು ಸಾಬೀತಾಗಿದೆ. ಇನ್ನು ಉಗ್ರರ ಬಳಿಯಿದ್ದ ಮತ್ತೊಂದು 'ರೆಡ್‌ಮಿ ನೋಟ್ 12' ಫೋನ್ ಅನ್ನು ಕೂಡ ಪಾಕಿಸ್ತಾನದ ಲಾಹೋರ್‌ನ 'ಏರ್ ಲಿಂಕ್ ಕಮ್ಯುನಿಕೇಷನ್ಸ್' ಎನ್ನುವ ಸಂಸ್ಥೆ ಆಮದು ಮಾಡಿಕೊಂಡಿದ್ದು, ಅದನ್ನು ಸಹ ದಾಳಿಗೆ ಮುನ್ನ ಎಂದೂ ಬಳಸಲಾಗಿರಲಿಲ್ಲ.
ಪ್ರಸ್ತುತ ಪಹಲ್ಗಾಮ್ ದಾಳಿಯಲ್ಲಿ ಈ ಬ್ಯಾಂಕ್ ಕೂಡ ನೇರವಾಗಿ ಭಾಗಿಯಾಗಿದೆ ಎನ್ನಲು ಯಾವುದೇ ನೇರ ಪುರಾವೆಗಳಿಲ್ಲದಿದ್ದರೂ, ಜಾಗತಿಕ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ತನಿಖೆಗಳಲ್ಲಿ ಈ ಬ್ಯಾಂಕ್‌ನ ಹೆಸರು ಈ ಹಿಂದೆಯೂ ಹಲವು ಬಾರಿ ಕೇಳಿಬಂದಿದೆ. ಅಮೆರಿಕದ 9/11 ದಾಳಿಯ ನಂತರ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದ ವರದಿಯ ಪ್ರಕಾರ, ಭಾರತದ ವಿರುದ್ಧ ವಿಧ್ವಂಸಕ ಕೃತ್ಯ ಎಸಗುವ ಲಷ್ಕರ್-ಎ-ತೊಯ್ಬಾ ಮತ್ತು ಅಲ್-ಖೈದಾ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಕುವೈತ್ ಮೂಲದ 'ಲಜ್ನತ್ ಅಲ್-ದವಾ' ಸಂಸ್ಥೆಯು ಇದೇ ಫೈಸಲ್ ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ಠೇವಣಿ ಖಾತೆಗಳನ್ನು ಹೊಂದಿತ್ತು. ಅಷ್ಟೇ ಅಲ್ಲದೆ, 2002ರಲ್ಲಿ ಪಾಕಿಸ್ತಾನದ ಎಫ್‌ಐಎ ತನಿಖೆ ನಡೆಸಿದಾಗ ಜೈಶ್-ಎ-ಮೊಹಮ್ಮದ್ ಸೇರಿದಂತೆ ಹಲವು ನಿಷೇಧಿತ ಉಗ್ರಗಾಮಿ ಸಂಘಟನೆಗಳು ಈ ಬ್ಯಾಂಕ್‌ನಲ್ಲಿ ಖಾತೆಗಳನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು.
ಡಿಜಿಟಲ್ ಸಾಕ್ಷಿಯೂ ಲಭ್ಯ
ಉಗ್ರರು ಭಾರತೀಯ ತನಿಖಾ ಸಂಸ್ಥೆಗಳ ಕಣ್ಣಿಗೆ ಮಣ್ಣೆರಚಲು ಸಾಮಾನ್ಯ ಸೆಲ್ಯುಲಾರ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಬಳಸುವ ಬದಲಾಗಿ, ದೀರ್ಘ ವ್ಯಾಪ್ತಿಯ 'ಲಾಂಗ್ ರೇಂಜ್ ರೇಡಿಯೋ ಕಮ್ಯುನಿಕೇಷನ್ ತಂತ್ರಜ್ಞಾನ' ಬಳಸುತ್ತಿದ್ದರು. ಈ ಕಾರಣದಿಂದಾಗಿ ಅವರ ಫೋನ್‌ಗಳಲ್ಲಿ ಯಾವುದೇ ಫೋನ್ ಕರೆಗಳ ದಾಖಲೆಗಳು ಸಿಕ್ಕಿಲ್ಲ. ಆದರೆ, ಸೈಬರ್ ತಜ್ಞರು ಫೋನ್‌ನಲ್ಲಿದ್ದ ಡಿಜಿಟಲ್ ದತ್ತಾಂಶಗಳನ್ನು ಯಶಸ್ವಿಯಾಗಿ ಮರುಪಡೆದಿದ್ದು (Data Recovery), ಅದರಲ್ಲಿ ಪಹಲ್ಗಾಮ್‌ನ ಪ್ರಸಿದ್ಧ ಬೈಸರನ್ ಕಣಿವೆಯ ಸಂಪೂರ್ಣ ನಕ್ಷೆಗಳು ಮತ್ತು ಫೋಟೋಗಳು ಲಭ್ಯವಾಗಿವೆ. ದಾಳಿಗೆ ಮುನ್ನ ಅಂದರೆ ಮಾರ್ಚ್ 30, 2025 ರಂದು ಉಗ್ರರು ಎತ್ತರದ ಹಿಮದ ಪ್ರದೇಶದಲ್ಲಿ ಹಾಕಿದ್ದ ರಹಸ್ಯ ಟೆಂಟ್‌ನ ಫೋಟೋ ಕೂಡ ಇದರಲ್ಲಿ ಪತ್ತೆಯಾಗಿದೆ. ಪಾಕಿಸ್ತಾನದ ಕುಮ್ಮಿಕ್ಕಿನಿಂದ ನಡೆದ ಈ ಯೋಜಿತ ದಾಳಿಯ ಜಾಲವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಭದ್ರತಾ ಪಡೆಗಳಿಗೆ ಭಾರಿ ಶಕ್ತಿ ಸಿಕ್ಕಂತಾಗಿದೆ.

