ಮುಂಬೈ: ಖ್ಯಾತ ಗಾಯಕಿ ಆಶಾ ಬೋಸ್ಲೆ ನಿಧನರಾದ ಕೆಲವೇ ವಾರಗಳಲ್ಲಿ ಭಾರತದ ಸಂಗೀತ ಕ್ಷೇತ್ರ ಮತ್ತೊಬ್ಬರು ಮೇರು ಗಾಯಕಿಯನ್ನು ಕಳೆದುಕೊಂಡಿದೆ. ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣಪುರ (89) ಭಾನುವಾರ ರಾತ್ರಿ ಕೊನೆಯುಸಿರೆಳೆದರು.
'ಶುಕ್ರಚಿ ಚಾಂದನಿ' ಮತ್ತು 'ಮಂಗು' ಚಿತ್ರಗಳ ಮೂಲಕ 1954ರಲ್ಲಿ ಅವರ ಗಾನಯಾನ ಆರಂಭವಾಗಿತ್ತು.
ಆ ಬಳಿಕ ಹಲವು ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ದೇಶದ ಉದ್ದಗಲಕ್ಕೂ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡರು. ಮೊಹ್ಮದ್ ರಫಿ ಜತೆಗಿನ ಅವರ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ.
ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ಮಂದಿ ಸುಮನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಅವಿಭಜಿತ ಭಾರತದ ಭಾಗವಾಗಿದ್ದ ಢಾಕಾದಲ್ಲಿ 1937ರ ಜನವರಿ 28ರಂದು ಜನಿಸಿದ ಸುಮನ್ ಅವರು ಮರಾಠಿ ಚಿತ್ರರಂಗದ ಮೇರು ಗಾಯಕಿ ಎನಿಸಿಕೊಂಡಿದ್ದರು. ಚಿತ್ರರಂಗದ ಹೊರತಾಗಿ ಭಜನೆ, ಗಝಲ್ ಮತ್ತು ಭಗವದ್ಗೀತೆಯ ಗಾಯನದ ಮೂಲಕ ಅಪೂರ್ವ ಗಾಯಕಿ ಎನಿಸಿಕೊಂಡಿದ್ದರು.
ಮುಂಬೈನ ಸೆಂಟ್ ಕೊಲಂಬಸ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಅವರು, ಸರ್ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲೆ ಶಿಕ್ಷಣ ಪಡೆದರು. ಆದರೆ ಆ ಹಂತದಲ್ಲಿ ಸಂಗೀತ ಕ್ಷೇತ್ರ ಅವರನ್ನು ಆಕರ್ಷಿಸಿದ್ದು, ಪಂಡಿತ್ ಕೇಶವರಾವ್ ಭೋಲೆ, ಉಸ್ತಾದ್ ಖಾನ್ ಅಬ್ದುಲ್ ರಹಮಾನ್ ಖಾನ್ ಮತ್ತು ಮಾಸ್ಟರ್ ನವರಂಗ್ ಅವರರಿಂದ ಸಂಗೀತ ಶಿಕ್ಷಣ ಪಡೆದರು. 1958ರಲ್ಲಿ ರಮಾನಂದ್ ಕಲ್ಯಾಣ್ಪುರ ಅವರನ್ನು ವಿವಾಹವಾದರು.
ಮೃತ ಸುಮನ್ ಅವರು ಪುತ್ರಿ ಚಾರು ಅಗ್ನಿಯವರನ್ನು ಅಗಲಿದ್ದಾರೆ.

