HEALTH TIPS

ಬಹುಪತ್ನಿತ್ವ: ಎನ್‌ಸಿಪಿ ಶಾಸಕಿ ಸನಾ ಮಲಿಕ್‌ ಹೇಳಿಕೆಗೆ ತೀವ್ರ ವಿರೋಧ

ಮುಂಬೈ: ಬಹುಪತ್ನಿತ್ವದ ಬಗ್ಗೆ ಎನ್‌ಸಿಪಿ ಅಜಿತ್ ಪವಾರ್‌ ಬಣದ ಶಾಸಕಿ ಸನಾ ಮಲಿಕ್ ಅವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಮಹಿಳಾ ಹಕ್ಕುಗಳ ಕುರಿತು ಅವರ ನಿಲುವನ್ನು ಅನೇಕ ನಾಯಕರು ಪ್ರಶ್ನಿಸಿದ್ದಾರೆ.

ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳ ಕುರಿತು ಮಂಗಳವಾರ ಸದನದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಮಲಿಕ್‌ ಅವರು, ಬಿಜೆಪಿ ಶಾಸಕಿ ದೇವಯಾನಿ ಫರಾಂಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ವೇಳೆ ಈ ಹೇಳಿಕೆ ನೀಡಿದ್ದರು.

ಮೊದಲು ಮಾತನಾಡಿದ ಫರಾಂಡೆ, 'ಪಾಕಿಸ್ತಾನದಲ್ಲಿ ಶೇಕಡ ಒಂದರಷ್ಟು ಪುರುಷರು ಮಾತ್ರ ಬಹುಪತ್ನಿತ್ವವನ್ನು ಆಚರಿಸುತ್ತಾರೆ ಮತ್ತು ಅಲ್ಲಿ ಎರಡನೇ ಮದುವೆಗೆ ಅಧಿಕಾರಿಯೊಬ್ಬರ ಅನುಮತಿಯನ್ನು ಪಡೆಯಬೇಕಾಗುತ್ತದೆ' ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಲಿಕ್‌, 'ಕುರಾನ್‌ನಲ್ಲಿ ಏನನ್ನಾದರೂ ಉಲ್ಲೇಖಿಸಿದ್ದರೆ ಮತ್ತು ಅದನ್ನು ಪಾಕಿಸ್ತಾನದಲ್ಲಿ ಜಾರಿಗೊಳಿಸಿದ್ದರೆ, ಅದನ್ನು ಇಲ್ಲಿಯೂ ತರಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದಿದ್ದಾರೆ.

ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಶಿವಸೇನಾ ನಾಯಕಿ ಶೈನಾ, 'ಒಂದೆಡೆ ತ್ರಿವಳಿ ತಲಾಖ್ ರದ್ದು ಮಾಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ಗೌರವ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆ, ಮತ್ತೊಂದೆಡೆ ಇಲ್ಲಿ ಬಹುಪತ್ನಿತ್ವದ ಬಗ್ಗೆ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸನಾ ಮಲಿಕ್ ಇದ್ದಾರೆ' ಎಂದು ಹೇಳಿದ್ದಾರೆ.

'ಭಾರತವು ಸಂವಿಧಾನದಿಂದ ಆಡಳಿತ ನಡೆಸಲ್ಪಡುತ್ತದೆಯೇ ಹೊರತು ಕುರಾನ್‌ನಿಂದಲ್ಲ. ಯಾರಾದರೂ ಭಾರತದಲ್ಲಿ ವಾಸಿಸಬೇಕಾದರೆ, ಅವರು ಸಂವಿಧಾನವನ್ನು ಪಾಲಿಸಲೇಬೇಕು' ಎಂದು ಬಿಜೆಪಿ ಶಾಸಕಿ ಮನಿಷಾ ಚೌಧರಿ ಹೇಳಿದ್ದಾರೆ.

'ಕುರಾನ್ ಅನುಸರಿಸುವ ದೇಶವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮಲಿಕ್‌ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಬೇಕು' ಎಂದು ಹೇಳಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್, 'ಭಾರತದ ಕಾನೂನುಗಳನ್ನು ಅಳವಡಿಸಿಕೊಳ್ಳುವಂತೆ ಪಾಕಿಸ್ತಾನವನ್ನು ಕೇಳುವ ಧೈರ್ಯ ಅವರಿಗೆ ಇದೆಯೇ?' ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗೃಹ ಸಚಿವ ಯೋಗೇಶ್ ಕದಂ, 'ದೇಶದಲ್ಲಿ ಯಾವುದೇ ಕಾನೂನನ್ನು ಯಾವುದೇ ನಿರ್ದಿಷ್ಟ ಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿಲ್ಲ ಮತ್ತು ಯಾವುದೇ ಕಾನೂನನ್ನು ಪವಿತ್ರ ಗ್ರಂಥಕ್ಕೆ ಜೋಡಿಸುವುದು ಸೂಕ್ತವಲ್ಲ' ಎಂದು ಹೇಳಿದ್ದಾರೆ.

ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಲಾಗಿದೆ: ಸನಾ ಮಲಿಕ್‌

'ನಾನು ಬಹುಪತ್ನಿತ್ವವನ್ನು ಸಮರ್ಥಿಸುತ್ತಲೂ ಇಲ್ಲ, ಬೆಂಬಲಿಸುತ್ತಲೂ ಇಲ್ಲ. ಬಹುಪತ್ನಿತ್ವದ ವಿಧಾನಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡುತ್ತಿದ್ದೆ. ಆದರೆ, ಬಿಜೆಪಿ ಶಾಸಕಿ ಫರಾಂಡೆ ಅವರು ಪಾಕಿಸ್ತಾನದ ಉಲ್ಲೇಖಿಸಿ ಈ ವಿಷಯವನ್ನು ಪ್ರಸ್ತಾಪಿಸಿದರು, ಅದನ್ನು ನಾನು ಆಕ್ಷೇಪಿಸಿದ್ದೆ' ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಮಲಿಕ್‌ ತಿಳಿಸಿದ್ದಾರೆ.

'ಭಾರತದಲ್ಲಿ ಏನನ್ನಾದರೂ ನಿರ್ಧರಿಸಲು ನಾವು ಪಾಕಿಸ್ತಾನವನ್ನು ಏಕೆ ಉದಾಹರಣೆಯಾಗಿ ಬಳಸಬೇಕು? ಪಾಕಿಸ್ತಾನದ ಕಾನೂನುಗಳು ಕುರಾನ್ ಆಧಾರಿತವಾಗಿವೆ. ಯಾವುದೇ ಉಲ್ಲೇಖದ ಅಗತ್ಯವಿದ್ದರೆ, ಅದನ್ನು ಪವಿತ್ರ ಗ್ರಂಥ ಕುರಾನ್‌ನಿಂದ ತೆಗೆದುಕೊಳ್ಳಬಹುದು. ಭಾರತದ ಸಂವಿಧಾನವು ನಮಗೆ ಜೀವನ ವಿಧಾನಗಳು ಮತ್ತು ಜೀವನವನ್ನು ನಡೆಸುವ ಮಾರ್ಗಗಳನ್ನು ನೀಡಿದೆ. ಸಂವಿಧಾನವು ನಮಗೆ ನಮ್ಮ ಧರ್ಮವನ್ನು ಅನುಸರಿಸುವ ಹಕ್ಕನ್ನು ಸಹ ನೀಡಿದೆ' ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಗಳನ್ನು ಮತ್ತಷ್ಟು ಸ್ಪಷ್ಟಪಡಿಸಿದ ಸನಾ, 'ಇಸ್ಲಾಂನಲ್ಲಿ ಬಹುಪತ್ನಿತ್ವದ ಬಗ್ಗೆ ಉಲ್ಲೇಖಿಸಿರುವುದು ಹೌದು. ನನ್ನ ಪ್ರಶ್ನೆ ಏನೆಂದರೆ, ಕೇವಲ ಮುಸ್ಲಿಂ ಪುರುಷರು ಮಾತ್ರ ಬಹುಪತ್ನಿತ್ವದಲ್ಲಿ ತೊಡಗುತ್ತಾರೆಯೇ? ಇತರ ಪುರುಷರೂ ಇದರಲ್ಲಿ ತೊಡಗುತ್ತಾರೆ ಎಂಬುದು ನಿಜವಲ್ಲವೇ?' ಎಂದು ಕೇಳಿದ್ದಾರೆ.

ಮಹಿಳೆಯರ ಸಮಸ್ಯೆಗಳನ್ನು ಯಾವುದೇ ಧರ್ಮಕ್ಕೆ ಜೋಡಿಸಬಾರದು ಎಂದು ಹೇಳಿದ ಅವರು, ಸದನದಲ್ಲಿ ಪಾಕಿಸ್ತಾನವನ್ನು ಪ್ರಶಂಸಿಸಿರುವುದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ ಎಂದು ತಿಳಿಸಿದ್ದಾರೆ.

'ಜನರು ನನ್ನನ್ನು ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಿದ್ದಾರೆ. ಆದರೆ, ಆ ದೇಶದ ಹೆಸರನ್ನು ಮೊದಲು ಪ್ರಸ್ತಾಪಿಸಿದವರು ಬಿಜೆಪಿ ಶಾಸಕಿ. ನಾನು ಮಹಾರಾಷ್ಟ್ರದ ಮಗಳು. ಯಾರೋ ನನ್ನನ್ನು ಪಾಕಿಸ್ತಾನಕ್ಕೆ ಹೋಗಲು ಹೇಳಿದ ತಕ್ಷಣ ನಾನು ಹೋಗುವುದಿಲ್ಲ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries