ಕಾಸರಗೋಡು: ಅಂತಾರಾಷ್ಟ್ರೀಯ ಒಲಿಂಪಿಕ್ ದಿನಾಚರಣೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಕ್ರೀಡಾ ಮಂಡಳಿ ವತಿಯಿಂದ ಒಲಿಂಪಿಕ್ಸ್ ಓಟ ಮಂಗಳವಾರ ಕಾಸರಗೋಡಿನಲ್ಲಿ ಜರುಗಿತು. ಕಾಸರಗೋಡು ಸಿವಿಲ್ ಸ್ಟೇಷನ್ ವಠಾರದಿಂದ ಆರಂಭಗೊಂಡ ಓಟ ಉದಯಗಿರಿ ಜಿಲ್ಲಾ ಕ್ರೀಡಾ ಅಕಾಡೆಮಿ ಆವರಣದಲ್ಲಿ ಮುಕ್ತಾಯಗೊಂಡಿತು. ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಹಸಿರು ನಿಶಾನೆ ತೋರುವ ಮೂಲಕ ಓಟಕ್ಕೆ ಚಾಲನೆ ನೀಡುವುದರೊಂದಿಗೆ ತಾನೂ ಓಟದಲ್ಲಿ ಪಾಲ್ಗೊಂಡರು. ಒಲಿಂಪಿಕ್ ಓಟಕ್ಕೂ ಮೊದಲು ಜುಂಬಾ ಅಭ್ಯಾಸ ಕಾರ್ಯಕ್ರಮವೂ ನಡೆಯಿತು. ರಾಷ್ಟ್ರೀಯ ಫೆನ್ಸಿಂಗ್ ಕೆಡೆಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅನೈತಾ ನಂಬಿಯಾರ್ ಅವರನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು.
ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ. ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಲ್ಲಂ ನಾರಾಯಣನ್, ರಾಜ್ಯ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಪಿ. ಅಶೋಕನ್ ಮಾಸ್ಟರ್ ಮತ್ತು ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯಕಾರಿ ಸದಸ್ಯ ಅಶೋಕನ್ ಧರ್ಮತ್ತಡ್ಕ ಉಪಸ್ಥಿತರಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಆಡಳಿತ ಮಂಡಳಿ ಸದಸ್ಯರು, ಕ್ರೀಡಾ ಸಂಘಗಳ ಪ್ರತಿನಿಧಿಗಳು, ಕ್ರೀಡಾ ಅಕಾಡೆಮಿಯ ಕ್ರೀಡಾಳುಗಳು ಮತ್ತು ವಿವಿಧ ಕ್ಲಬ್‍ಗಳ ಪ್ರತಿನಿಧಿಗಳು ಓಟದಲ್ಲಿ ಭಾಗವಹಿಸಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಕ್ರೀಡಾ ಆಯುರ್ವೇದ ಜಾಗೃತಿ ತರಗತಿಯನ್ನು ನಡೆಸಲಾಯಿತು.



