ನವದೆಹಲಿ: ವಿರೋಧ ಪಕ್ಷಗಳ ಪಾಳಯದಲ್ಲಿನ ಒಡಕಿನ ಲಾಭ ಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರ, ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳೆಯರಿಗೆ ಮೀಸಲಾತಿ ಮಸೂದೆಗಳನ್ನು ಸಂಸತ್‌ನಲ್ಲಿ ಮತ್ತೊಮ್ಮೆ ಮಂಡಿಸುವ ಉತ್ಸಾಹದಲ್ಲಿದೆ.
ವಿರೋಧ ಪಕ್ಷಗಳ ಬಹಳಷ್ಟು ಸಂಸದರು ಆಡಳಿತಾರೂಢ ಎನ್‌ಡಿಎ ಜೊತೆ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ.
ಹೀಗಾಗಿ, ಮೂರು ಮಹತ್ವದ ಮಸೂದೆಗಳನ್ನು ಸಂಸತ್‌ನಲ್ಲಿ ಹೊಸದಾಗಿ ಮಂಡಿಸಿ, ಅಂಗೀಕರಿಸುವುದಕ್ಕೆ ಸಂಬಂಧಿಸಿದ ಮಾರ್ಗೋಪಾಯಗಳ ಕುರಿತು ಎನ್‌ಡಿಎ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026', ಮಹಿಳಾ ಮೀಸಲು ಕಾನೂನಿಗೆ ತಿದ್ದುಪಡಿ ಮಾಡುವ ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026 ಹಾಗೂ 'ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ-2026' ಅನ್ನು ಕೇಂದ್ರ ಸರ್ಕಾರ ಈ ಹಿಂದೆ ಮಂಡಿಸಿತ್ತು.
ಈ ಪೈಕಿ, ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಸೋಲುಂಟಾಗಿತ್ತು. 'ಇಂಡಿಯಾ' ಒಕ್ಕೂಟದ ನೇತೃತ್ವದಲ್ಲಿ ವಿರೋಧ ಪಕ್ಷಗಳ ಜಂಟಿ ಬಲದಿಂದ ಇದನ್ನು ತಡೆಯಲಾಗಿತ್ತು. ಲೋಕಕಸಭೆಯಲ್ಲಿ ಈ ಮಸೂದೆಗೆ 54 ಮತಗಳ ಸೋಲಾಗಿತ್ತು.
ಏತನ್ಮಧ್ಯೆ ಕಳೆದ ಕೆಲವು ವಾರಗಳಲ್ಲಿ ವಿರೋಧ ಪಕ್ಷಗಳ ಪಾಳಯದಲ್ಲಿ ಮೂಡಿರುವ ಒಡಕು ರಾಷ್ಟ್ರ ರಾಜಕಾರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಕೆಲವು ವಾರಗಳಿಂದ ಯಾರೂ ನಿರೀಕ್ಷಿಸದಂತಹ ಚಿತ್ರಣ ಈಗ ಮುನ್ನೆಲೆಗೆ ಬಂದಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಮತ್ತೆ ಮಂಡಿಸಿದರೆ ಅದು ಅಂಗೀಕಾರಗೊಳ್ಳುವ ಸಾಧ್ಯತೆ ದಟ್ವವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದಿರುವ ದೊಡ್ಡ ರಾಜಕೀಯ ಪಲ್ಲಟ ಮತ್ತು ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟುಗಳೇ ಇದಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಎದುರಾದ ಸೋಲಿನ ನಂತರ ನಡೆದ ನಾಟಕೀಯ ಬೆಳವಣಿಗೆಗಳು ಪಕ್ಷವು ಅಧಃಪತನದಕ್ಕೆ ಕಾರಣವಾಗಿದೆ. ಸಂಸತ್ತಿನಲ್ಲೂ ಟಿಎಂಸಿ ಬಣದ ಇಬ್ಭಾಗವು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಟಿಎಂಸಿಯ 28 ಸಂಸದರ ಪೈಕಿ ಹೆಚ್ಚಿನ ಸಂಖ್ಯೆಯ ಸಂಸದರು ಎನ್‌ಡಿಎ ಜೊತೆ ಕೈಜೋಡಿಸಲು ಒಲವು ವ್ಯಕ್ತಪಡಿಸಿದ್ದಾರೆ. ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಟಿಎಂಸಿಯ 20 ಸಂಸದರು ತಮ್ಮ ಗುಂಪನ್ನು ನ್ಯಾಷನಲಿಸ್ಟ್ ಸಿಟಿಜೆನ್ಸ್ ಪಾರ್ಟಿ ಆಫ್ ಇಂಡಿಯಾ(ಎನ್‌ಸಿಪಿಐ)ದಲ್ಲಿ ವಿಲೀನ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ಅವರ ಶಿವಸೇನಾ (ಯುಬಿಟಿ) ಸಹ ಇದೇ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಠಾಕ್ರೆ ಅವರ 9 ಸಂಸದರಲ್ಲಿ 6 ಸಂಸದರು ಪಕ್ಷ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅವರೆಲ್ಲರು ಏಕನಾಥ ಶಿಂದೆ ಅವರ ಬಣವನ್ನು ಸೇರಲಿದ್ದಾರೆ.
ಈ ಎಲ್ಲಾ ಬದಲಾವಣೆಗಳಿಂದ ದೊಡ್ಡ ಲಾಭ ಪಡೆಯಲಿರುವ ಎನ್‌ಡಿಎ ಮುಂಗಾರು ಅಧಿವೇಶನ ಆರಂಭವಾಗುವ ಮುನ್ನವೇ ಮೂರನೇ ಎರಡರಷ್ಟು ಬಹುಮತದ ಗುರಿಯನ್ನು ತಲುಪುವ ಸಾಧ್ಯತೆಯಿದೆ. ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಈ ಬಹುಮತ ಅತ್ಯಂತ ನಿರ್ಣಾಯಕವಾಗಿದೆ.
ಲೆಕ್ಕಾಚಾರ ಹೀಗಿದೆ:
ಲೋಕಸಭೆಯ 543 ಸ್ಥಾನಗಳಲ್ಲಿ ಬಹುಮತಕ್ಕೆ ಮೂರನೇ ಎರಡರಷ್ಟು ಎಂದರೆ 362 ಬೇಕಾಗಿವೆ. ಆದರೆ ಪ್ರಸ್ತುತ ಮೂರು ಸ್ಥಾನಗಳು ಖಾಲಿ ಇರುವುದರಿಂದ, ಬಹುಮತದ ಸಂಖ್ಯೆ 360ಕ್ಕೆ ಇಳಿದಿದೆ.
ಸದ್ಯಕ್ಕೆ, ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣವನ್ನು ಒಳಗೊಂಡಂತೆ ಎನ್‌ಡಿಎ ಲೋಕಸಭೆಯಲ್ಲಿ 318 ಸಂಸದರನ್ನು ಹೊಂದಿದೆ. ವಿರೋಧ ಪಕ್ಷವು 184 ಸಂಸದರನ್ನು ಹೊಂದಿದೆ. ಇನ್ನು ಯಾವುದೇ ಒಕ್ಕೂಟಕ್ಕೆ ಸೇರದ 38 ತಟಸ್ಥ ಸಂಸದರಿದ್ದಾರೆ. ಹೀಗಾಗಿ, ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರಕ್ಕೆ 42 ಸಂಸದರ ಬೆಂಬಲ ಬೇಕಿದೆ.
ಆದರೆ ಇದು ಕೇವಲ ಕಾಗದದ ಮೇಲಿನ ಲೆಕ್ಕಾಚಾರವಷ್ಟೇ. ಮಸೂದೆ ಅಂಗೀಕಾರದ ಸಮಯದಲ್ಲಿ ಸದನದಲ್ಲಿ ಹಾಜರಿರುವ ಸಂಸದರ ಸಂಖ್ಯೆಯೇ ಅಂತಿಮವಾಗುತ್ತದೆ. ಉದಾಹರಣೆಗೆ, ಬಜೆಟ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ, 540 ಸದಸ್ಯರಲ್ಲಿ 528 ಸದಸ್ಯರು ಹಾಜರಿದ್ದರು ಮತ್ತು ಬಹುಮತದ ಸಂಖ್ಯೆ 352 ಆಗಿತ್ತು.
ಆಗ ಸರ್ಕಾರದ ಪರವಾಗಿ 298 ಮತಗಳು ಚಲಾವಣೆಯಾಗಿದ್ದವು. ಅಲ್ಲದೆ ಮಸೂದೆಗೆ 54 ಮತಗಳಿಂದ ಸೋಲಾಗಿತ್ತು. ಆ ಸನ್ನಿವೇಶವನ್ನು ಗಮನಿಸಿದರೆ (ಅಲ್ಲಿ 12 ಸಂಸದರು ಗೈರುಹಾಜರಾಗಿದ್ದರು), ಸರ್ಕಾರವು ತನ್ನ ಪರವಾಗಿ 54 ಸಂಸದರನ್ನು ಸೆಳೆಯಬೇಕಾಗುತ್ತದೆ. ಈ 54 ಸಂಸದರಲ್ಲಿ, ಈಗ ಎನ್‌ಸಿಪಿಐ ಭಾಗವಾಗಿರುವ 20 ಸಂಸದರು ಸೇರಿದ್ದಾರೆ. ಶಿವಸೇನಾ ಯುಬಿಟಿಯ 6 ಸಂಸದರೂ ಸೇರಿದಾಗ ಈ ಸಂಖ್ಯೆ 26ಕ್ಕೆ ಏರಿಕೆಯಾಗುತ್ತದೆ.
ಇದರೊಂದಿಗೆ, ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ವಿರೋಧ ಪಕ್ಷದ 'ಇಂಡಿಯಾ' ಮೈತ್ರಿಕೂಟದಿಂದ ಹೊರಬಂದಿರುವ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಕೂಡ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸರ್ಕಾರದೊಂದಿಗೆ ಡಿಎಂಕೆ ಮಾತುಕತೆ ನಡೆಸುತ್ತಿದ್ದು, ಡಿಎಂಕೆಯ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡರೆ, ಆ ಪಕ್ಷದ 22 ಸಂಸದರ ಬೆಂಬಲದೊಂದಿಗೆ ಎನ್‌ಡಿಎ ಸಂಖ್ಯಾಬಲ 348ಕ್ಕೆ ತಲುಪುತ್ತದೆ. ಅಂದರೆ ಬಹುಮತಕ್ಕೆ ಕೇವಲ 6 ಮತಗಳು ಅಭಾವ ಕಂಡುಬರಲಿದೆ.
ಇನ್ನುಳಿದ ಕೊನೆಯ 6 ಮತಗಳು ಎಲ್ಲಿಂದ ಬರಬಹುದು ಎಂಬ ಪ್ರಶ್ನೆಗೆ, ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಕಡೆಗೆ ಬೊಟ್ಟು ಮಾಡಿದ್ದಾರೆ. ಆದರೆ ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಎಸ್‌ಪಿ ಪಕ್ಷವನ್ನು ಒಡೆಯುವುದು ಅಷ್ಟು ಸುಲಭವಲ್ಲ. ಆದ್ದರಿಂದ, ಬಿಜೆಪಿ ನಾಯಕರು 'ಇಂಡಿಯಾ' ಮೈತ್ರಿಕೂಟದಲ್ಲಿರುವ ಇತರ ಸಣ್ಣ ಪಕ್ಷಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಹಾರಾಷ್ಟ್ರದ ಒಂದು ಸಣ್ಣ ಪಕ್ಷದೊಂದಿಗೂ ಬಿಜೆಪಿ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ರಾಜ್ಯಸಭೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಮೂರನೇ ಎರಡರಷ್ಟು ಬಹುಮತಕ್ಕೆ 164 ಸಂಸದರ ಅಗತ್ಯವಿದೆ. ರಾಜ್ಯಸಭೆಯ ಗರಿಷ್ಠ ಸಂಖ್ಯಾಬಲ 250 ಆಗಿದ್ದರೂ, ಪ್ರಸ್ತುತ 245 ಸದಸ್ಯರಿದ್ದಾರೆ. ಇಲ್ಲಿ ಎನ್‌ಡಿಎ 150 ಸಂಸದರನ್ನು ಹೊಂದಿದೆ. ಡಿಎಂಕೆಯ 8 ಸಂಸದರ ಬೆಂಬಲ ಸಿಕ್ಕರೆ ಈ ಸಂಖ್ಯೆ 158 ಕ್ಕೆ ತಲುಪುತ್ತದೆ ಮತ್ತು ಅಲ್ಲಿಯೂ ಕೇವಲ ಆರು ಮತಗಳ ಕೊರತೆ ಇರುತ್ತದೆ.
ಮೂವರು ತೃಣಮೂಲ ಸಂಸದರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯ ನಂತರ ಮತ್ತು ಕೆಲವು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಎನ್‌ಡಿಎ ರಾಜ್ಯಸಭೆಯಲ್ಲೂ ಆ 'ಮ್ಯಾಜಿಕ್' ಸಂಖ್ಯೆಯನ್ನು ತಲುಪುವ ಸಂಪೂರ್ಣ ಸಾಧ್ಯತೆಯಿದೆ.
ಇದು ಸಾಧ್ಯವಾದರೆ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆ ಮತ್ತೆ ಮುಂಚೂಣಿಗೆ ಬರಲಿದೆ. ಬಹುಶಃ ಮುಂದಿನ ತಿಂಗಳು ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲೇ ಇದು ಸಂಭವಿಸಬಹುದು. ಇದರ ಬೆನ್ನಲ್ಲೇ 'ಒಂದು ದೇಶ, ಒಂದು ಚುನಾವಣೆ' ಮಸೂದೆಯನ್ನು ಮಂಡಿಸಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

