ಇಸ್ತಾಂಬುಲ್ : ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಒಪ್ಪಂದದ ಮಾತುಕತೆ ನಡೆಸಲು ಇರಾನ್ ತುಂಬಾ ಸಮಯ ತೆಗೆದುಕೊಂಡಿದೆ. ಅದರ ಪರಿಣಾಮವಾಗಿ ಈಗ ಅದು ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮತ್ತು ಅಮೆರಿಕದ ಪಡೆಗಳ ನಡುವೆ ಮಂಗಳವಾರ ರಾತ್ರಿ ನಡೆದ ದಾಳಿ-ಪ್ರತಿದಾಳಿಯ ಬಳಿಕ ತಮ್ಮ 'ಟ್ರೂತ್ ಸೋಶಿಯಲ್' ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, 'ಇರಾನ್ ನ ಸೇನಾ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅದರ ನೌಕಾಪಡೆ ಮತ್ತು ವಾಯುಪಡೆಯ ಬಹುಭಾಗ ಈಗ ಅಸ್ತಿತ್ವದಲ್ಲಿಲ್ಲ. ಅವರು ಸಂಪೂರ್ಣವಾಗಿ ಸೋಲಿಸಲ್ಪಟ್ಟಿದ್ದಾರೆ. ಇರಾನ್ ಹೆಚ್ಚು ಮಾತನಾಡುತ್ತದೆ; ಆದರೆ ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ' ಎಂದು ಹೇಳಿದ್ದಾರೆ.
'ಇರಾನ್‌ಗೆ ಅನುಕೂಲಕರವಾಗಿದ್ದ ಒಪ್ಪಂದವನ್ನು ಅಂತಿಮಗೊಳಿಸಲು ಅವರು ತುಂಬಾ ಸಮಯ ತೆಗೆದುಕೊಂಡಿದ್ದಾರೆ. ಈಗ ಅದರ ಬೆಲೆ ತೆರಬೇಕಾಗುತ್ತದೆ' ಎಂದೂ ಅವರು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಇಸ್ರೇಲ್ ಮತ್ತು ಇರಾನ್ ಪರಸ್ಪರ ದಾಳಿಗಳನ್ನು ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಅಮೆರಿಕ ಮತ್ತು ಇರಾನ್ ಪಡೆಗಳ ನಡುವೆಯೂ ನೇರ ಸಂಘರ್ಷ ಉಂಟಾಗಿದೆ.
ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ಘಟನೆಯ ಪ್ರತಿಕ್ರಿಯೆಯಾಗಿ ಹಾರ್ಮುಝ್ ಜಲಸಂಧಿ ಸಮೀಪದ ಇರಾನ್ ನ ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ರಾಡಾರ್ ಕೇಂದ್ರಗಳ ಮೇಲೆ ಅಮೆರಿಕದ ಯುದ್ಧವಿಮಾನಗಳು ದಾಳಿ ನಡೆಸಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (ಅಇಓಖಿಅಔಒ) ತಿಳಿಸಿದೆ.
ಇದಕ್ಕೆ ಪ್ರತಿಯಾಗಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ಬುಧವಾರ ಮುಂಜಾನೆ ಮಧ್ಯಪ್ರಾಚ್ಯದ ವಿವಿಧ ಭಾಗಗಳಲ್ಲಿರುವ ಅಮೆರಿಕದ ವಾಯು ಹಾಗೂ ನೌಕಾ ನೆಲೆಗಳಿಗೆ ಸಂಬಂಧಿಸಿದ 21 ಸೇನಾ ನೆಲೆಗಳ ಮೇಲೆ ಪ್ರತೀಕಾರವಾಗಿ ದಾಳಿ ನಡೆಸಿರುವುದಾಗಿ ಹೇಳಿದೆ.
ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಸಂಘರ್ಷ ವ್ಯಾಪಿಸುವ ಆತಂಕ ಹೆಚ್ಚಾಗಿದೆ.

