ಮಂಜೇಶ್ವರ: ಯಾವುದೇ ಜವಾಬ್ದಾರಿಗಳ ಹಂಗಿಲ್ಲದೇ ಮನಬಂದಂತೆ ಉಲ್ಲಾಸದಿಂದ ಬಾಲ್ಯವನ್ನು ಮಕ್ಕಳು ಅನುಭವಿಸಬೇಕು. ದೇಶದ ಹಾಗೂ ಕೇರಳದ ಶೈಕ್ಷಣಿಕ ಕ್ಷೇತ್ರವನ್ನು ಅತ್ಯುನ್ನತ ಮಟ್ಟಿಗೆ ಏರಿಸುವಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಹೇಳಿದರು.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಉಪ್ಪಳ ಐಲ ಶ್ರೀಶಾರದಾ ಬೋವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಮಾಧ್ಯಮ ಶಾಲೆಯನ್ನು ತನ್ನ ಶಿಕ್ಷಣ ಮಾಧ್ಯಮವನ್ನಾಗಿ ಆರಿಸಿದ ಹೆತ್ತವರ ಆಯ್ಕೆ ನನ್ನ ಇಂದಿನ ಹಂತದ ಬೆಳವಣಿಗೆಗೆ ಪೂರಕವಾಗಿದೆ ಎಂದು ಬಾಲ್ಯವನ್ನು ನೆನಪಿಸಿದರು. ಶಾಲಾ ವ್ಯವಸ್ಥಾಪಕ ಆನಂದ ಕೆ.ಐಲ, ದೀಪ ಪ್ರಜ್ವಲನೆ ನಡೆಸಿದರು. ಮಂಗಲ್ಪಾಡಿ ಗ್ರಾ.ಪಂ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮಂಗಲ್ಪಾಡಿ ಗ್ರಾ.ಪಂ ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಬಪ್ಪಾಯಿತೊಟ್ಟಿ, ಮಂಗಲ್ಪಾಡಿ ಗ್ರಾಪಂ ಸದಸ್ಯರಾದ ಬಿ.ಎಂ. ಸಲೀಮ್, ವಸಂತ ಮಯ್ಯ, ರವೀಂದ್ರ ಶೆಟ್ಟಿ, ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಸಿ.ಹೆಚ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್, ಮಾತೃ ಸಂಘದ ಸದಸ್ಯೆ ಸೌಜನ್ಯ, ಜಿತೇಂದ್ರ ಎಸ್.ಎಚ್, ಹಿರಿಯ ಅಧೀಕ್ಷಕ, ಹೆಚ್ಚುವರಿ ಸಹಾಯಕ ಶಿಕ್ಷಣಾಧಿಕಾರಿ ರಾಜಗೋಪಾಲ, ಬಿಪಿಸಿ ಮಂಜೇಶ್ವರ, ನಿವೃತ್ತ ಮುಖ್ಯಶಿಕ್ಷಕಿ ಜಲಜಾಕ್ಷಿ.ಎ ಶುಭಹಾರೈಸಿದರು. ಸಹ ಸಂಚಾಲಕಿ ಸ್ವಾತಿ ಉಚ್ಚಿಲ್ ಸ್ವಾಗತಿಸಿ, ಅಮಿತಾ ಐಲ ವಂದಿಸಿದರು. ಕೆ.ಪಿ ನಭ ಹಾಗೂ ರಂಜಿತ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.
ನೂತನವಾಗಿ ಪ್ರವೇಶಾತಿ ಪಡೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಣೆ;
ಕನ್ನಡ ಮಾಧ್ಯಮ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಐಲ ಬೋವಿ ಶಾಲೆಯಲ್ಲಿ ನೂತನವಾಗಿ ಪ್ರವೇಶಾತಿ ಪಡೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಬ್ಯಾಗ್ ವಿತರಿಸಲಾಯಿತು.

.jpg)
.jpeg)
