ಕಾಸರಗೋಡು: ನಡಕ್ಕಾವು ಒಳಾಂಗಣ ಕ್ರೀಡಾಂಗಣ ಮತ್ತು ಫುಟ್ಬಾಲ್ ಕ್ರೀಡಾಂಗಣದ ಗರಿಷ್ಠ ಪ್ರಯೋಜನಗಳನ್ನು ಕ್ರೀಡಾ ಪ್ರೇಮಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಲಭ್ಯವಾಗುವಂತೆ ಕ್ರೀಡಾಂಗಣಗಳನ್ನು ತಕ್ಷಣ ತೆರೆದು ನೀಡುವಂತೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಆದೇಶ ನೀಡಿದ್ದಾರೆ. ತ್ರಿಕರಿಪುರದ ನಡಕ್ಕಾವು ಒಳಾಂಗಣ ಕ್ರೀಡಾಂಗಣ ಮತ್ತು ಫುಟ್ಬಾಲ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕ್ರೀಡಾ ಇಲಾಖೆ, ಗ್ರಾಮ ಪಂಚಾಯಿತಿ ಸೇರಿದಂತೆ ಇತರ ಇಲಾಖೆಗಳ ಸಮನ್ವಯದೊಂದಿಗೆ ಕ್ರೀಡಾಂಗಣ ತೆರೆದುಕೊಡಲು ಕ್ರಮ ತ್ವರಿತಗೊಳಿಸಲಾಗುವುದು. ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ಕ್ರಮ ಕೈಗೊಳ್ಳಲಾಗುವುದು. ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಸೌಲಭ್ಯ ಶೀಘ್ರ ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಹೆಚ್ಚಿನ ಆದ್ಯತೆ ನೀಡುತ್ತಿದೆ.
ಜಿಲ್ಲಾ ಅಭಿವೃದ್ಧಿ ಸಮಿತಿ (ಡಿಡಿಸಿ) ಸಭೆಯಲ್ಲಿ ತ್ರಿಕರಿಪುರ ಶಾಸಕ ಸಂದೀಪ್ ವಾರಿಯರ್ ಅವರು ತ್ರಿಕರಿಪುರದಲ್ಲಿ ಕ್ರೀಡಾಂಗಣಗಳ ಕಾರ್ಯಾಚರಣೆಯನ್ನು ಶೀಘ್ರ ಪ್ರಾರಂಭಿಸುವ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಕ್ರೀಡಾಂಗಣ ತೆರೆದುಕೊಡಲು ಕ್ರಮ ಆರಂಭಿಸಿದ್ದಾರೆ. ಇದೇ ಸಂದರ್ಭ ಕ್ರೀಡಾಂಗಣ ಭೇಟಿಗೆ ಸಂಬಂಧಿಸಿದಂತೆ ತ್ರಿಕರಿಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದರು. ಜಿಲ್ಲಾಧಿಕಾರಿಯೊಂದಿಗೆ ತ್ರಿಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಜಿದಾ ಸಫರುಲ್ಲಾ, ಉಪಾಧ್ಯಕ್ಷ ಎಂ.ರಾಜೀಶ್ ಬಾಬು, ಪಂಚಾಯಿತಿ ಸದಸ್ಯ ಫಾಯಿಸ್ ಯು.ಪಿ. ಉಪಸ್ಥಿತರಿದ್ದರು.



