ಮುಂಬೈ: ಬಾಲಿವುಡ್(Bollywood) ನಟ ಆಮಿರ್ ಖಾನ್(Aamir khan) ಇತ್ತೀಚಿನ ದಿನಗಳಲ್ಲಿ ನಟನೆಗಿಂತಲೂ ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ತಮ್ಮ 'ಆಮಿರ್ ಖಾನ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ವಿಭಿನ್ನ ಚಿತ್ರಗಳನ್ನು ನೀಡುವ ಆಮಿರ್, ಈಗ ಭಾರತದ(India) ಗೌರವಾನ್ವಿತ ರಾಷ್ಟ್ರಪತಿ(President) ದ್ರೌಪದಿ ಮುರ್ಮು(Droupadi Murmu) ಅವರ ಸ್ಪೂರ್ತಿದಾಯಕ ಜೀವನದ ಕುರಿತು ವಿಶೇಷ ಸಾಕ್ಷ್ಯಚಿತ್ರ (Documentary) ಒಂದನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.ಒಡಿಶಾದ ಸಣ್ಣ ಹಳ್ಳಿಯೊಂದರಿಂದ ಆರಂಭವಾಗಿ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪೀಠದವರೆಗೆ ದ್ರೌಪದಿ ಮುರ್ಮು ಅವರು ನಡೆದುಬಂದ ರೋಚಕ ಹಾದಿಯನ್ನು ಈ ಸಾಕ್ಷ್ಯಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತಿದೆ. ಖ್ಯಾತ ಬರಹಗಾರ್ತಿ ಮತ್ತು ನಿರ್ದೇಶಕಿ ಸ್ವಾತಿ ಚಕ್ರವರ್ತಿ ಈ ಮಹತ್ವಾಕಾಂಕ್ಷೆಯ ಡಾಕ್ಯುಮೆಂಟರಿಯನ್ನು ನಿರ್ದೇಶಿಸುತ್ತಿದ್ದಾರೆ.
ಕಷ್ಟದ ದಿನಗಳು ಹಾಗೂ ಬಾಲ್ಯದ ಮರುಸೃಷ್ಟಿ
ವರದಿಗಳ ಪ್ರಕಾರ, ಈ ಸಾಕ್ಷ್ಯಚಿತ್ರದಲ್ಲಿ ದ್ರೌಪದಿ ಮುರ್ಮು ಅವರ ಜೀವನದ ಪ್ರಮುಖ ಘಟ್ಟಗಳನ್ನು ಅತ್ಯಂತ ಆಪ್ತವಾಗಿ ಚಿತ್ರಿಸಲಾಗುತ್ತಿದೆ. ಒಡಿಶಾದ ಹಳ್ಳಿಯ ದಿನಗಳು, ಅವರ ಸಾರ್ವಜನಿಕ ಜೀವನದ ಪ್ರವೇಶ ಹಾಗೂ ಭಾರತದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾದ ಸುಂದರ ಕ್ಷಣಗಳು ಇದರಲ್ಲಿ ಇರಲಿವೆ. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಜೀವನದಲ್ಲಿ ಅವರು ಎದುರಿಸಿದ ಕಠಿಣ ಸವಾಲುಗಳು, ಸಾವು-ನೋವುಗಳು ಮತ್ತು ಅವುಗಳನ್ನು ಮೆಟ್ಟಿ ನಿಂತ ಅವರ ಧೈರ್ಯದ ಕಥೆಯೂ ಈ ಸಾಕ್ಷ್ಯಚಿತ್ರದ ಮುಖ್ಯ ಭಾಗವಾಗಿರಲಿದೆ.
ಇನ್ನು, ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಒಡಿಶಾದ ಹಳ್ಳಿಯಲ್ಲೇ ಈಗಾಗಲೇ ಕೆಲವು ಪ್ರಮುಖ ಭಾಗಗಳ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಅವರ ಬಾಲ್ಯದ ದಿನಗಳನ್ನು ನೈಜವಾಗಿ ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಚಿತ್ರೀಕರಣ ನಡೆಸಿರುವುದು ಇದರ ವಿಶೇಷತೆ.
ಈ ಹಿಂದೆ ಆಮಿರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಸೂಪರ್ ಹಟ್ 'ರುಬಾರು ರೋಶ್ನಿ' (2019) ಸಾಕ್ಷ್ಯಚಿತ್ರವನ್ನು ಕೂಡ ಸ್ವಾತಿ ಚಕ್ರವರ್ತಿ ಅವರೇ ನಿರ್ದೇಶಿಸಿದ್ದರು. ಈಗ ಈ ಯಶಸ್ವಿ ಜೋಡಿ ದ್ರೌಪದಿ ಮುರ್ಮು ಅವರ ಬಯೋಪಿಕ್ ಮಾದರಿಯ ಡಾಕ್ಯುಮೆಂಟರಿಗಾಗಿ ಮತ್ತೊಮ್ಮೆ ಕೈಜೋಡಿಸಿದೆ.
ಅಲ್ಲದೆ, ಆಮಿರ್ ಖಾನ್ ಪ್ರೊಡಕ್ಷನ್ಸ್ ಸಖತ್ ಬ್ಯುಸಿಯಾಗಿದ್ದು, ಸನ್ನಿ ಡಿಯೋಲ್ ನಟನೆಯ ಮತ್ತು ರಾಜ್‌ಕುಮಾರ್ ಸಂತೋಷಿ ನಿರ್ದೇಶನದ 'ಬಟ್ವಾರಾ 1947' ಚಿತ್ರದ ಪ್ರಮೋಷನ್ ಕೆಲಸಗಳಲ್ಲೂ ತೊಡಗಿಸಿಕೊಂಡಿದೆ. ಈ ಸಿನಿಮಾ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

