ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (ಎಫ್‌ಸಿಆರ್‌ಎ) ಹೊಸ ನಿಯಮ ಗಳನ್ನು ಹಿಂಪಡೆಯುವಂತೆ ಕೇರಳದ ಸಂಸದರಾದ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್ ಹಾಗೂ ಸಿಪಿಎಂನ ಜಾನ್ ಬ್ರಿಟ್ಟಾಸ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಅವರು, 'ವಿದೇಶಿ ದೇಣಿಗೆ ಪಡೆಯುವ ಪ್ರಕ್ರಿಯೆಯನ್ನು ನಿಯಂತ್ರಿಸುವುದಕ್ಕಾಗಿ ಈ ಹೊಸ ನಿಯಮಗಳನ್ನು ರೂಪಿಸಲಾಗಿಲ್ಲ.
ಎನ್‌ಜಿಒಗಳ ಸ್ವಾಯತ್ತತೆ ಮತ್ತು ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡುವಿನ ಸೂಕ್ಷ್ಮ ಸಮತೋಲನವನ್ನು ನಾಶ ಮಾಡುವ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಲಾಗಿದೆ' ಎಂದು ತಿಳಿಸಿದ್ದಾರೆ.
ಎನ್‌ಜಿಒಗಳು ತಾವು ಕೈಗೊಳ್ಳುವ ಒಟ್ಟು 105 ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ವಿದೇಶಿ ದೇಣಿಗೆ ಪಡೆಯುವುದರ ಮೇಲೆ ಈ ಹೊಸ ನಿಯಮಗಳು ನಿರ್ಬಂಧ ಹೇರುತ್ತವೆ. ಅಲ್ಲದೇ, ಮತಾಂತರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ವಿದೇಶಿ ದೇಣಿಗೆ ಪಡೆಯುವುದನ್ನು ಕೂಡ ನಿಷೇಧಿಸುತ್ತವೆ.
'ಅಧಿಸೂಚಿತ ಹೊಸ ನಿಯಮಗಳು ಎನ್‌ಜಿಒಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ. ಹೊಸ ನಿಯಮಗಳ ಪ್ರಕಾರ ಅವು ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟ ಸಂಸ್ಥೆಗಳಾಗಲಿವೆ. ಇಂತಹ ನಿಯಮಗಳು ಎನ್‌ಜಿಒಗಳ ಶವಪೆಟ್ಟಿಗೆಗೆ ಹೊಡೆಯುವ ಕೊನೆ ಮೊಳೆಯಂತಾಗಲಿವೆ' ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.
'ಸರ್ಕಾರವೇ ಸಿದ್ಧಪಡಿಸುವ ಪಟ್ಟಿಯಲ್ಲಿನ ಚಟುವಟಿಕೆಗಳನ್ನೇ ಆಯ್ಕೆ ಮಾಡಿಕೊಳ್ಳುವಂತೆ ಎನ್‌ಜಿಒಗಳ ಮೇಲೆ ಒತ್ತಡ ಹಾಕಲಾಗುತ್ತದೆ. ಅವುಗಳ ಕಾರ್ಯ ಕ್ಷೇತ್ರದ ಮೇಲೂ ನಿರ್ಬಂಧ ಹೇರಲಾಗುತ್ತದೆ. ಎನ್‌ಜಿಒಗಳು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಕಾರ್ಯ ನಿರ್ವಹಣೆ ಮಾಡುವುದನ್ನು ಇಂತಹ ಕ್ರಮಗಳು ತಡೆಯಲಿವೆ' ಎಂದು ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರೂ ಆಗಿರುವ ವೇಣುಗೋಪಾಲ್ ಪ್ರತಿಪಾದಿಸಿದ್ದಾರೆ.
'ಬಲವಂತದ ಮತಾಂತರವನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ, ಮತಾಂತರ ಕುರಿತಂತೆ ಎಫ್‌ಸಿಆರ್‌ಎ ನಿಯಮಗಳಲ್ಲಿ ಸ್ಪಷ್ಟ ವ್ಯಾಖ್ಯಾನವೇ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಲಿದೆ' ಎಂದು ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ವಿವರಿಸಿದ್ದಾರೆ.
ಜಾನ್ ಬ್ರಿಟ್ಟಾಸ್

