ನವದೆಹಲಿ: 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ರಾಷ್ಟ್ರೀಯ ದಾಖಲೆ ಮುರಿದ ಓಟಗಾರರಾದ ಗುರಿಂದರ್‌ವೀರ್ ಸಿಂಗ್ ಮತ್ತು ಅನಿಮೇಶ್ ಕುಜೂರ್ ಅವರೊಂದಿಗಿ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಷನ್ ಕಪ್ ಕೂಟದಲ್ಲಿನ ಪುರುಷರ 100 ಮೀಟರ್ ಓಟದ ಸ್ಪರ್ಧೆ ಇಡೀ ದೇಶದಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ರಾಂಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ 100 ಮೀಟರ್ ಓಟವನ್ನು 10.09 ಸೆಕೆಂಡುಗಳಲ್ಲಿ ತಲುಪಿ ಗುರಿಂದರ್‌ವೀರ್ ಸಿಂಗ್ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.
ಇದೇ ಕೂಟದಲ್ಲಿ ನಾಲ್ಕು ವಿಭಿನ್ನ ದಾಖಲೆಗಳನ್ನು ಮುರಿದ ಗುರಿಂದರ್‌ವೀರ್ ಸಿಂಗ್, ವಿಶಾಲ್ ಟಿಕೆ. ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ ಅವರಿಗೆ ಪ್ರಧಾನಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
100 ಮೀಟರ್ ಓಟದ ಸ್ಪರ್ಧೆ ವ್ಯಾಪಕ ಚರ್ಚೆಯಾಗುತ್ತಿದೆ. ಎರಡು ದಿನಗಳಲ್ಲಿ ಮೂರು ಸಲ ರಾಷ್ಟ್ರೀಯ ದಾಖಲೆ ಮುರಿಯಲಾಯಿತು. ಭಾರತೀಯ ಅಥ್ಲೆಟಿಕ್ಸ್ ಭವಿಷ್ಯ ಏಕೆ ಉಜ್ವಲವಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಅವರೊಂದಿಗೆ ಗುರಿಂದರ್‌ವೀರ್ ಹಾಗೂ ಅನಿಮೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೇರಳಂನ ಆಲುವಾದಲ್ಲಿ ಸಾಜಿ ವಲಶೆರಿಲ್ ನಡೆಸುತ್ತಿರುವ ಈಜು ಕ್ಲಬ್ ಅನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ವಿಶೇಷ ಚೇತನರು ಸೇರಿದಂತೆ 15,000ಕ್ಕೂ ಅಧಿಕ ಜನರು ಈಜು ಕಲಿತಿದ್ದಾರೆ ಎಂದು ಅಭಿನಂದಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ನಡೆದ ದೋಣಿ ದುರಂತದಲ್ಲಿ ಹಲವಾರು ವಿದ್ಯಾರ್ಥಿಗಳು ಮೃತಪಟ್ಟ ಬಳಿಕ ಸಾಜಿ ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಘಟನೆಯನ್ನು ಸಾಜಿ ಅವರಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು. ಈಜು ಕಲಿತರೆ ಅನೇಕ ಜೀವಗಳನ್ನು ಉಳಿಸಬಹುದಿತ್ತು. ಅಲ್ಲಿಂದ ಅವರ ಅಭಿಯಾನ ಆರಂಭವಾಯಿತು ಎಂದು ಹೇಳಿದ್ದಾರೆ.

