HEALTH TIPS

ಅಹಮದಾಬಾದ್ | ನಕಲಿ ಬ್ಲಡ್ ಪ್ಲಾಸ್ಮಾ ದಂಧೆ ಭೇದಿಸಿದ ಪೊಲೀಸರು: ಪ್ರಮುಖ ರೂವಾರಿ ಸೇರಿ ನಾಲ್ವರ ಬಂಧನ

ಅಹಮದಾಬಾದ್: ಫಾರ್ಮಾಸ್ಯುಟಿಕಲ್ ಕಂಪನಿಯೊಂದಕ್ಕೆ ಪೂರೈಸಲಾಗುತ್ತಿದ್ದ ರಕ್ತದ ಪ್ಲಾಸ್ಮಾ ಬ್ಯಾಗ್‌ಗಳನ್ನು ಕಲಬೆರಕೆ ಮಾಡುತ್ತಿದ್ದ ಬೃಹತ್ ದಂಧೆಯನ್ನು ಅಹಮದಾಬಾದ್ ಗ್ರಾಮಾಂತರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಭೇದಿಸಿದ್ದು, ಪ್ರಕರಣದ ಪ್ರಮುಖ ರೂವಾರಿ ಸೇರಿದಂತೆ ನಾಲ್ವರನ್ನು ಬಂಧಿಸಿದೆ.

ಚಾಂಗೋದರ್‌ನಲ್ಲಿರುವ ಫಾರ್ಮಾಸ್ಯುಟಿಕಲ್ ಕಂಪನಿಯೊಂದಕ್ಕೆ ಪೂರೈಸಲಾಗುತ್ತಿದ್ದ ರಕ್ತದ ಪ್ಲಾಸ್ಮಾ ಬ್ಯಾಗ್‌ಗಳನ್ನು ಕಲಬೆರಕೆ ಮಾಡಲಾಗುತ್ತಿತ್ತು. ಬನಸ್ಕಾಂತ ಮೂಲದ ದಿನೇಶ್‌ಭಾಯ್ ಉಮಾಭಾಯ್ ಚೌಧರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ವಿವಿಧ ಔಷಧ ತಯಾರಿಕಾ ಕಂಪನಿಗಳಲ್ಲಿ ಬ್ಲಡ್ ಪ್ಲಾಸ್ಮಾ ಸಂಗ್ರಹಣಾ ಅಧಿಕಾರಿಯಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃತ್ತಿ ಅನುಭವದಿಂದ ಈ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ತಾಂತ್ರಿಕ ಜ್ಞಾನ ಹೊಂದಿದ್ದ ಚೌಧರಿ, ಪ್ಲಾಸ್ಮಾ ಸಂಗ್ರಹಣಾ ವಾಹನದ ಚಾಲಕ ಜಿತೇಂದ್ರ ಸೋಲಂಕಿ ಹಾಗೂ ಸಹಚಾಲಕ ರಫೀಕ್ ಖಲೀಫಾ ಅವರೊಂದಿಗೆ ಸೇರಿ ಈ ದಂಧೆಯನ್ನು ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ವಿವಿಧ ಬ್ಲಡ್ ಬ್ಯಾಂಕ್‌ಗಳಿಂದ ಶುದ್ಧ ಪ್ಲಾಸ್ಮಾವನ್ನು ಸಂಗ್ರಹಿಸಿದಾಗಲೆಲ್ಲಾ, ಸಾರಿಗೆ ತಂಡವು ಅದರ ಮಾಹಿತಿಯನ್ನು ಚೌಧರಿಗೆ ಮುಂಚಿತವಾಗಿ ನೀಡುತ್ತಿತ್ತು. ಬಳಿಕ ಪ್ಲಾಸ್ಮಾವನ್ನು ಫಾರ್ಮಾಸ್ಯುಟಿಕಲ್ ಕಂಪನಿಗೆ ಸಾಗಿಸುವ ಮಾರ್ಗಮಧ್ಯೆ ವಾಹನವನ್ನು ಚೌಧರಿಯ ನಿವಾಸದತ್ತ ತಿರುಗಿಸಲಾಗುತ್ತಿತ್ತು. ಅಲ್ಲಿ ಉತ್ತಮ ಗುಣಮಟ್ಟದ ಪ್ಲಾಸ್ಮಾ ಯುನಿಟ್‌ಗಳನ್ನು ಹೊರತೆಗೆದು, ಆರ್ಡರ್ ಮಾಡಲಾದ ಪ್ರಮಾಣಕ್ಕೆ ತಕ್ಕಂತೆ ಬ್ಯಾಗ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಿಸದಂತೆ ಅವುಗಳ ಬದಲಿಗೆ ಕಲಬೆರಕೆ ಮಾಡಿದ ಪ್ಲಾಸ್ಮಾ ಬ್ಯಾಗ್‌ಗಳನ್ನು ಇರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಪೊಲೀಸರು ಒಟ್ಟು 12,06,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಅಂದಾಜು 11,00,000 ರೂ. ಮೌಲ್ಯದ 1,140 ಬ್ಲಡ್ ಪ್ಲಾಸ್ಮಾ ಯುನಿಟ್‌ಗಳು, ಒಂದು ಡೀಪ್ ಫ್ರೀಜರ್, ಮೂರು ರಾಸಾಯನಿಕ ಬಾಟಲಿಗಳು, ಸೀಲಿಂಗ್ ಯಂತ್ರ, 34 ಖಾಲಿ ಪ್ಲಾಸ್ಮಾ ಬ್ಯಾಗ್‌ಗಳು ಹಾಗೂ ಅಪರಾಧಕ್ಕೆ ಬಳಸಲಾಗಿದ್ದ ಮಹೀಂದ್ರಾ ಬೊಲೆರೊ ಪಿಕಪ್ ಟ್ರಕ್ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ, ಈ ಹಗರಣದ ಪ್ರಮುಖ ಸಂಚುಗಾರನಾಗಿದ್ದ ಮಹಾರಾಷ್ಟ್ರ ಮೂಲದ ಮೋಹನ್ ದಾಜಿಬಾ ಗಾಯಕ್ವಾಡ್‌ನನ್ನೂ ಬಂಧಿಸಲಾಗಿದೆ.

"ಕಲಬೆರಕೆ ಮಾಡಿದ ಪ್ಲಾಸ್ಮಾ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದ್ದ ಜಾಲವನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಎಎಸ್‌ಐ ಮುಖೇಶ್ ಸಿನ್ಹಾ ದೋಲತ್ ಸಿನ್ಹಾ ಹಾಗೂ ಕಾನ್‌ಸ್ಟೆಬಲ್ ಮೇರುಭಾ ಘನಶ್ಯಾಮ್ ಸಿನ್ಹಾ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ, ಚಾಂಗೋದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಕಿತ ವ್ಯಕ್ತಿಯ ಮೇಲೆ ತೀವ್ರ ನಿಗಾ ಇರಿಸಲಾಗಿತ್ತು. ಅದರ ಪರಿಣಾಮವಾಗಿ ಈ ದಂಧೆ ಬೆಳಕಿಗೆ ಬಂದಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 316(3), 338(2), 125, 276, 328(4) ಹಾಗೂ 61(2) ಅಡಿಯಲ್ಲಿ ಚಾಂಗೋದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries