ಜಾಮ್‌ನಗರ: ತೀವ್ರ ನೋವಿನಿಂದ ಬಳಲುತ್ತಿದ್ದ 48 ವರ್ಷದ ಹೆಣ್ಣಾನೆ ಮನಿಕಿಯನ್ನು ಸುಧಾರಿತ ಚಿಕಿತ್ಸೆ ಮತ್ತು ಶಾಶ್ವತ ಆರೈಕೆಗಾಗಿ ಜಾಮ್‌ನಗರದ 'ವಂತಾರ' ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ವರ್ಷಗಟ್ಟಲೆ ನರಕಯಾತನೆ ಅನುಭವಿಸುತ್ತಿದ್ದ ಆನೆಗೆ ಈಗ ಸುರಕ್ಷಿತ ಮತ್ತು ಘನತೆಯ ಜೀವನದ ಅವಕಾಶ ದೊರೆತಿದೆ.
ಮನಿಕಿಯ ಎಡ ಮುಂಗಾಲಿನ ಹಳೆಯ ಗಾಯವು ವ್ರಣವಾಗಿ ನಡಿಗೆ ಮತ್ತು ಚಲನವಲನಕ್ಕೆ ತೀವ್ರ ಅಡಚಣೆ ಉಂಟುಮಾಡಿತ್ತು. ಇದರ ಜತೆಗೆ ವಯೋಸಹಜ ಸಮಸ್ಯೆಗಳು, ಗಾಯದ ಸೋಂಕು, ಒಂದು ಕಣ್ಣಿನ ದೃಷ್ಟಿ ದೋಷ, ನಿರ್ಜಲೀಕರಣ ಮತ್ತು ಕ್ಷೀಣಿಸಿದ ದೈಹಿಕ ಸ್ಥಿತಿಯಿಂದ ಆನೆ ಬಳಲುತ್ತಿತ್ತು. ಅಸ್ಸಾಂನ ಹೆದ್ದಾರಿಯಲ್ಲಿ ನೋವಿನಿಂದ ಕುಂಟುತ್ತಾ ಸಾಗುತ್ತಿದ್ದ ಆನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆನೆಯ ದುಃಸ್ಥಿತಿ ಕಂಡು ದೇಶದಾದ್ಯಂತ ನಾಗರಿಕರು ಮತ್ತು ಪ್ರಾಣಿಪ್ರಿಯರು ತುರ್ತು ನೆರವಿಗೆ ಆಗ್ರಹಿಸಿದರು. ಸಹಿ ಸಂಗ್ರಹ, ಮನವಿ ಅಭಿಯಾನಗಳು ನಡೆದವು. ಆನೆಗೆ ದೀರ್ಘಕಾಲೀನ ಆರೈಕೆ ಅಗತ್ಯವಿರುವುದನ್ನು ಮನಗಂಡ ಮಾಲೀಕರಾದ ರುಚಿ ಚೇತಿಯಾ ಅವರು ಸುಪ್ರೀಂ ಕೋರ್ಟ್ ನೇಮಿಸಿದ ವನ್ಯಜೀವಿಗಳ ರಕ್ಷಣೆ ಮತ್ತು ಆರೈಕೆ ಸಮಿತಿಗೆ ಮನವಿ ಸಲ್ಲಿಸಿದರು. ಸಮಿತಿ ಹಾಗೂ ಅಸ್ಸಾಂ ಮತ್ತು ಗುಜರಾತ್ ಸರ್ಕಾರಗಳ ಅನುಮತಿ ಪಡೆದು ಆನೆಯನ್ನು 'ವಂತಾರ'ಕ್ಕೆ ಸ್ಥಳಾಂತರಿಸಲಾಗಿದೆ.
ವಂತಾರದ ವಕ್ತಾರರ ಪ್ರಕಾರ, ಮನಿಕಿಗೆ ಸಮಗ್ರ ಪಶುವೈದ್ಯಕೀಯ ಆರೈಕೆ ಅಗತ್ಯವಿದೆ. ಅಸಹಜ ನಡಿಗೆ, ಕುಂಟುವಿಕೆ, ನಿರ್ಜಲೀಕರಣ, ಗಾಯದ ಸೋಂಕು ಸೇರಿದಂತೆ ಹಲವು ಸಮಸ್ಯೆಗಳಿಗೆ ವ್ಯವಸ್ಥಿತ ದೀರ್ಘಕಾಲೀನ ಚಿಕಿತ್ಸಾ ಯೋಜನೆ ರೂಪಿಸಲಾಗಿದೆ. ಔಷಧೋಪಚಾರ, ಹೈಡ್ರೋಥೆರಪಿ, ಅಕ್ಯುಪಂಕ್ಚರ್ ಮೂಲಕ ನೋವು ಉಪಶಮನ, ಗಾಯದ ಆರೈಕೆ ಮತ್ತು ಪೌಷ್ಟಿಕ ಆಹಾರ ಪೂರೈಕೆ ತಕ್ಷಣದ ಆದ್ಯತೆಗಳಾಗಿವೆ.
ಕೇವಲ ವೈದ್ಯಕೀಯ ಚಿಕಿತ್ಸೆಗೆ ಸೀಮಿತವಾಗದೆ, ಗಾಯಗೊಂಡ ಕಾಲಿನ ಮೇಲಿನ ಒತ್ತಡ ತಗ್ಗಿಸಲು ಮೃದುವಾದ ಮಣ್ಣು ಮತ್ತು ನೈಸರ್ಗಿಕ ನೆಲ, ಅಂಗಾಂಗಗಳ ಭಾರ ಕಡಿಮೆ ಮಾಡಲು ನೈಸರ್ಗಿಕ ಕೊಳಗಳು, ಸ್ವಾಭಾವಿಕ ಆಹಾರ ಹುಡುಕಾಟಕ್ಕೆ ಅವಕಾಶ ಮತ್ತು ಇತರ ಆನೆಗಳ ಒಡನಾಟದ ವ್ಯವಸ್ಥೆಯನ್ನು ವಂತಾರದಲ್ಲಿ ಕಲ್ಪಿಸಲಾಗಿದೆ.
ಸಾಮೂಹಿಕ ಧ್ವನಿ, ಜವಾಬ್ದಾರಿಯುತ ನಿರ್ಧಾರ ಮತ್ತು ಸಂಘಟಿತ ಪ್ರಯತ್ನಗಳಿಂದ ಮನಿಕಿಯ ಜೀವನದ ದಿಕ್ಕು ಬದಲಾಗಿದೆ. ಅಗತ್ಯ ಬೆಂಬಲ ಮತ್ತು ಅನುಮತಿಗಳೊಂದಿಗೆ ಆನೆಗೆ ಈಗ ಸುರಕ್ಷಿತ, ಆರಾಮದಾಯಕ ಭವಿಷ್ಯ ಲಭಿಸಿದೆ. ನೋವಿನ ನಡಿಗೆಯ ದಿನಗಳು ಮುಗಿದು ಮನಿಕಿ ವಂತಾರದಲ್ಲಿ ಗುಣಮುಖಳಾಗುತ್ತಿದ್ದಾಳೆ.

