ನವದೆಹಲಿ: ಅಮೆಜಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ಅವರೊಂದಿಗೆ ಅತ್ಯುತ್ತಮ ಸಭೆ ನಡೆಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಭಾರತದಲ್ಲಿ ಅಮೆಜಾನ್ ಸಂಸ್ಥೆ ದಾಖಲೆಯ 48 ಬಿಲಿಯನ್ ಡಾಲರ್ (₹4.5 ಲಕ್ಷ ಕೋಟಿ) ಹೂಡಿಕೆ ಮಾಡುವ ನಿರ್ಧಾರವನ್ನು ಸ್ವಾಗತಿಸಿರುವ ಪ್ರಧಾನಿ ಮೋದಿ, ಈ ಹೂಡಿಕೆಯು ದೇಶದ ಯುವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಭಾರತದಲ್ಲಿ ಹೂಡಿಕೆ ಮಾಡಲು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಮೋದಿ, 'ಆಂಡಿ ಜಾಸ್ಸಿ ಅವರೊಂದಿಗೆ ಉತ್ತಮ ಸಭೆ ನಡೆಯಿತು. ಭಾರತದಲ್ಲಿ ಅಮೆಜಾನ್ ಸಂಸ್ಥೆಯ ದಾಖಲೆಯ 48 ಬಿಲಿಯನ್ ಡಾಲರ್ ಹೂಡಿಕೆಯನ್ನು ನಾನು ಸ್ವಾಗತಿಸುತ್ತೇನೆ. ಇದರಿಂದ ನಮ್ಮ ಯುವಜನತೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಭಾರತದಲ್ಲಿ ಹೂಡಿಕೆ ಮಾಡಲು ವಿಶ್ವದಾದ್ಯಂತ ಹೆಚ್ಚುತ್ತಿರುವ ಆಸಕ್ತಿಯನ್ನೂ ಇದು ತೋರಿಸುತ್ತದೆ' ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ಬಳಿಕ ಮಾತನಾಡಿದ ಆಂಡಿ ಜಾಸ್ಸಿ, 'ನಾವು ಒಂದು ದಶಕದ ಹಿಂದೆ ಭಾರತಕ್ಕೆ ಬಂದೆವು. ಅಂದಿನಿಂದ ನಮ್ಮ ಇ-ಕಾಮರ್ಸ್, ಎಐ ಮತ್ತು ಕ್ಲೌಡ್ ಉದ್ಯಮಗಳಿಗೆ ಭಾರತೀಯ ಗ್ರಾಹಕರು ಮತ್ತು ಉದ್ಯಮಿಗಳಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರಧಾನಿ ಮೋದಿಯವರ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತದ ಕನಸಿನಿಂದ ನಾವು ಪ್ರೇರಿತರಾಗಿದ್ದೇವೆ' ಎಂದು ಪ್ರಶಂಸಿಸಿದರು.

