ನವದೆಹಲಿ: ಬಿಜೆಪಿಯ ವಿರುದ್ಧ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಕರೆಯಲಾಗಿರುವ ಮಹತ್ವದ ʼಇಂಡಿಯಾ ಜನಬಂಧನ್ʼ ಸಭೆ ಪ್ರಾರಂಭಗೊಂಡಿದ್ದು, ಸಭೆಯಲ್ಲಿ ಟಿಎಂಸಿ ವರಿಷ್ಠೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಭಾಗವಹಿಸಿದ್ದಾರೆ.
ಆದರೆ, ಇಂಡಿಯಾ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾದ ಡಿಎಂಕೆ ಸಭೆಯಿಂದ ದೂರವುಳಿದಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಸಂವಿಧಾನದ ಮೇಲಿನ ದಾಳಿ ತಡೆಯಿಲ್ಲದೆ ಮುಂದುವರಿದಿದೆ. ತಮ್ಮ ರಾಜಕೀಯ ವಿರೋಧಿಗಳನ್ನು ಬೆದರಿಸಲು ಕೇಂದ್ರ ಸರಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಸಾಧನವನ್ನಾಗಿ ನಿರಂತರವಾಗಿ ಬಳಸುತ್ತಿದೆ" ಎಂದು ಆರೋಪಿಸಿದರು.
ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್ಸಿಪಿ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀತರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಮತ್ತಿತರರು ಸೇರಿದಂತೆ ಒಟ್ಟು 23 ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ.
ಈ ನಡುವೆ, ಇಂಡಿಯಾ ಜನಬಂಧನ್ ಸಭೆ ಪ್ರಾರಂಭಕ್ಕೂ ಮುನ್ನ, ಸಭೆ ನಡೆಯುತ್ತಿದ್ದ ಸ್ಥಳದ ಹೊರಗೆ ರಾಹುಲ್ ಗಾಂಧಿ ವಿರೋಧಿ ಭಿತ್ತಿಚಿತ್ರಗಳು ಕಂಡು ಬಂದವು.

