HEALTH TIPS

ಗೋಮೂತ್ರ ಸಂಶೋಧನಾ ಪ್ರಬಂಧಗಳ ತನಿಖೆಗೆ ವಿದೇಶಿ ಜರ್ನಲ್‌ ಗಳ ಮೊರೆ ಹೋದ LiverDoc

ನವದೆಹಲಿ: LiverDoc ಎಂದೇ ಪರಿಚಿತರಾಗಿರುವ ವೈದ್ಯ ಹಾಗೂ ಲೇಖಕ ಸಿರಿಯಾಕ್ ಅಬ್ಬಿ ಫಿಲಿಪ್ಸ್, ಕೇಂದ್ರ ಸರ್ಕಾರದ SUTRA-PIC ಯೋಜನೆಯಡಿ ಐಐಟಿಗಳ ವಿಜ್ಞಾನಿಗಳು ಪ್ರಕಟಿಸಿರುವ ಗೋಮೂತ್ರ ಸಂಶೋಧನಾ ಪ್ರಬಂಧಗಳ ವಿರುದ್ಧ ವಿದೇಶಿ ವೈಜ್ಞಾನಿಕ ನಿಯತಕಾಲಿಕೆಗಳಿಗೆ ದೂರು ಸಲ್ಲಿಸಿದ್ದು, ಸಂಶೋಧನಾ ಸಮಗ್ರತೆ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ.

ಗೋಮೂತ್ರ ಸಂಶೋಧನೆಗೆ ಸಂಬಂಧಿಸಿದ ಪ್ರಬಂಧಗಳನ್ನು ಪ್ರಕಟಿಸಿರುವ ಸ್ಪ್ರಿಂಗರ್ ನೇಚರ್ ಹಾಗೂ ಎಸಿಎಸ್ ಪಬ್ಲಿಕೇಷನ್ಸ್ (ACS Publications) ಸಂಸ್ಥೆಗಳಿಗೆ ಇ-ಮೇಲ್ ಮೂಲಕ ತಮ್ಮ ಆಕ್ಷೇಪಗಳನ್ನು ಸಲ್ಲಿಸಿರುವುದಾಗಿ ಫಿಲಿಪ್ಸ್ ತಿಳಿಸಿದ್ದಾರೆ. ಎರಡೂ ಪ್ರಕಾಶನ ಸಂಸ್ಥೆಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು, ತನಿಖೆ ಆರಂಭಿಸುವ ಭರವಸೆ ನೀಡಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ.

'ಸ್ಪ್ರಿಂಗರ್ ನೇಚರ್‌ ನ ಸಂಶೋಧನಾ ಸಮಗ್ರತೆ ತಂಡವು ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದೆ. ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ' ಎಂದು ಫಿಲಿಪ್ಸ್ ತಿಳಿಸಿದ್ದಾರೆ.

ಅವರು ಆಕ್ಷೇಪ ವ್ಯಕ್ತಪಡಿಸಿರುವ ಪ್ರಬಂಧವು 'ವಿವಿಧ ತಳಿಗಳ ಗೋಮೂತ್ರದ ಮೆಟಾಬಾಲೊಮಿಕ್ ಪ್ರೊಫೈಲಿಂಗ್' ಎಂಬ ಶೀರ್ಷಿಕೆಯನ್ನು ಹೊಂದಿದ್ದು, 2025ರಲ್ಲಿ ಐಐಟಿ-ಬಿಎಚ್‌ಯು ವಿಜ್ಞಾನಿ ಅಭಿಷೇಕ್ ಧೋಬಲ್ ನೇತೃತ್ವದಲ್ಲಿ ಎಸ್‌ಯುಟಿಆರ್‌ಎ-ಪಿಐಸಿ ಯೋಜನೆಯಡಿ ಪ್ರಕಟಿಸಲಾಗಿತ್ತು.

98 ಕೋಟಿ ರೂ. ಅನುದಾನ

The Print ವರದಿಯ ಪ್ರಕಾರ, ಮೋದಿ ಸರಕಾರವು ಎಸ್‌ಯುಟಿಆರ್‌ಎ-ಪಿಐಸಿ ಯೋಜನೆಯಡಿ ಗೋಸಂಶೋಧನೆಗಾಗಿ 98 ಕೋಟಿ ರೂ. ಅನುದಾನ ನೀಡಿದೆ. ಈ ಯೋಜನೆಯಡಿ ಪ್ರಕಟವಾಗಿರುವ ಪ್ರಬಂಧಗಳಲ್ಲಿ ವೈಜ್ಞಾನಿಕ ದೋಷಗಳಿವೆ ಎಂದು ಫಿಲಿಪ್ಸ್ ಆರಂಭದಿಂದಲೂ ಆರೋಪಿಸುತ್ತಿದ್ದು, ಈ ಸಂಬಂಧ ಎಕ್ಸ್‌ನಲ್ಲಿ ಹಲವು ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.

ತಮ್ಮ ದೂರಿನ ಹಿನ್ನೆಲೆಯಲ್ಲಿ ವಿಷಯವನ್ನು ಸ್ಪ್ರಿಂಗರ್ ನೇಚರ್ ರಿಸರ್ಚ್ ಇಂಟೆಗ್ರಿಟಿ ಗ್ರೂಪ್ (SNRIG)ಗೆ ವರ್ಗಾಯಿಸಿರುವುದಾಗಿ ಸ್ಪ್ರಿಂಗರ್ ನೇಚರ್ ತಿಳಿಸಿದೆ. ಈ ತಂಡವು ಸಮಗ್ರ ತನಿಖೆ ನಡೆಸಿ, ಸೂಕ್ತ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಿದೆ.

'ಸ್ಪ್ರಿಂಗರ್ ನೇಚರ್, ಕಮಿಟಿ ಆನ್ ಪಬ್ಲಿಕೇಷನ್ ಎಥಿಕ್ಸ್ (COPE) ಸದಸ್ಯ ಸಂಸ್ಥೆಯಾಗಿದೆ. ಸಂಬಂಧಿತ ಮಾರ್ಗಸೂಚಿಗಳ ಅನುಸಾರ ತನಿಖೆ ನಡೆಸಲಾಗುವುದು. ವಿವಿಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕಿರುವುದರಿಂದ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗಬಹುದು' ಎಂದು ಪ್ರಕಾಶಕರು ತಿಳಿಸಿದ್ದಾರೆ.

ಪ್ರಬಂಧದ ವಿರುದ್ಧ ಫಿಲಿಪ್ಸ್ ಆರೋಪಗಳೇನು?

ಪ್ರಬಂಧದ ಪ್ರಕಾರ, ಗೋಮೂತ್ರವು ಕೃಷಿ ಮತ್ತು ಔಷಧೀಯ ಬಳಕೆಯಲ್ಲಿ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ, ಭಾರತದ ಏಳು ದೇಶೀ ಹಸುಗಳ ತಳಿಗಳ ಗೋಮೂತ್ರದಲ್ಲಿರುವ ವಿವಿಧ ರಾಸಾಯನಿಕ ಅಂಶಗಳನ್ನು ಅಧ್ಯಯನ ಮಾಡಲಾಗಿದೆ.

ಆದರೆ, 'ಈ ಪ್ರಬಂಧವು ಕಳಪೆ ಗುಣಮಟ್ಟದ್ದಾಗಿದ್ದು, ತಪ್ಪಾಗಿ ಅರ್ಥೈಸಲಾದ ಹಾಗೂ ದೋಷಪೂರಿತ ಫಲಿತಾಂಶಗಳನ್ನು ಒಳಗೊಂಡ ಮೂರನೇ ದರ್ಜೆಯ ಪ್ರಕಟಣೆ' ಎಂದು ಫಿಲಿಪ್ಸ್ ಟೀಕಿಸಿದ್ದಾರೆ.

ಪ್ರಬಂಧದ ಪ್ರಕಾರ, ಹಸುವಿನ ಮೂತ್ರದಲ್ಲಿ ಎಥನೋನ್, ಕ್ರೆಸೋಲ್, ಬಿಸ್ (2-ಈಥೈಲ್‌ಹೆಕ್ಸಿಲ್) ಥಾಲೇಟ್, ಫೀನಾಲ್, ಐಕೋಸೇನ್ ಹಾಗೂ ಪೆಂಟನಾಲ್ ಸೇರಿದಂತೆ ಹಲವು ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಂಶಗಳನ್ನು ವಿವಿಧ ಕ್ಷೇತ್ರಗಳಲ್ಲಿ ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಬಳಸಬಹುದೆಂದೂ ಅವರು ಪ್ರತಿಪಾದಿಸಿದ್ದಾರೆ.

ಆದರೆ, ಪ್ರಬಂಧದಲ್ಲಿ ಉಲ್ಲೇಖಿಸಿರುವ ಹಲವು ಅಂಶಗಳು ಪ್ರಯೋಗಾಲಯದ ಮಾಲಿನ್ಯದಿಂದ ಉಂಟಾಗುವವುಗಳಾಗಿದ್ದು, ಅವುಗಳನ್ನು ಗೋಮೂತ್ರದಲ್ಲಿರುವ ಅಂಶಗಳೆಂದು ತಪ್ಪಾಗಿ ದಾಖಲಿಸಲಾಗಿದೆ ಎಂದು ಫಿಲಿಪ್ಸ್ ಆರೋಪಿಸಿದ್ದಾರೆ.

ಈ ಪ್ರಬಂಧವನ್ನು 2025ರ ಜೂನ್‌ 19ರಂದು ಪ್ರಕಟಣೆಗೆ ಅಂಗೀಕರಿಸಲಾಗಿದ್ದು, ಒಂದು ತಿಂಗಳ ಬಳಿಕ ಬ್ರಿಟನ್-ಜರ್ಮನಿ ಮೂಲದ ಸ್ಪ್ರಿಂಗರ್ ನೇಚರ್ ಪ್ರಕಟಿಸಿತ್ತು.

ವಿಮರ್ಶೆಯಲ್ಲಿ ಕಂಡುಬಂದ ದೋಷಗಳು

ಪ್ರಬಂಧ ಪ್ರಕಟವಾದ ಬಳಿಕ ತಾವು ಅದರ ಸಮಗ್ರ ವಿಶ್ಲೇಷಣೆ ನಡೆಸಿದ್ದಾಗಿ ಫಿಲಿಪ್ಸ್ ಹೇಳಿದ್ದಾರೆ. ಈ ವೇಳೆ, ಸಂಶೋಧಕರು ಪ್ರಯೋಗಾಲಯದ ಮಾಲಿನ್ಯವನ್ನು ಪರಿಗಣಿಸಿಲ್ಲ. ದತ್ತಾಂಶಕ್ಕೆ ಹೊಂದಿಕೆಯಾಗದ ತೀರ್ಮಾನಗಳನ್ನು ನೀಡಿದ್ದಾರೆ. ಅಲ್ಲದೆ, ಆಧಾರರಹಿತ ಆರೋಗ್ಯ ಸಂಬಂಧಿ ಹೇಳಿಕೆಗಳನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮೂಲಭೂತ ಅಂಕಿಅಂಶಗಳ ವಿಶ್ಲೇಷಣೆ ನಡೆಸಿಲ್ಲ. ಪ್ರತಿ ತಳಿಯಿಂದ ಕೇವಲ ಒಂದು ಹಸುವಿನ ಮಾದರಿಯನ್ನು ಮಾತ್ರ ಪರೀಕ್ಷಿಸಿರುವುದು ಸಂಶೋಧನೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದು ಅವರು ಹೇಳಿದ್ದಾರೆ.

ಪ್ರಬಂಧದಲ್ಲಿ ಮೂತ್ರದಲ್ಲಿ ನಿಷೇಧಿತ ಕೀಟನಾಶಕಗಳು, ಮಾನವರಿಗೆ ನೀಡುವ ಔಷಧಗಳು ಹಾಗೂ ವಿಷಕಾರಿ ಲೋಹಗಳು ಪತ್ತೆಯಾಗಿವೆ ಎಂದು ಹೇಳಲಾಗಿದ್ದು, ಯಾವುದೇ ಪರಿಶೀಲನೆ ನಡೆಸದೆ ಕಂಪ್ಯೂಟರ್ ಸಾಫ್ಟ್‌ವೇರ್ ನೀಡಿದ ಫಲಿತಾಂಶಗಳನ್ನು ಕುರುಡಾಗಿ ನಂಬಿರುವುದನ್ನು ಇದು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು the print, ಅಧ್ಯಯನ ನಡೆಸಿರುವ ಲೇಖಕರಾದ ಜೀತೇಶ್ ಕುಶ್ವಾಹ, ಯಶ್ಪಾಲ್ ಸಿಂಗ್, ಎಂ.ಎಸ್. ಮಹೇಶ್, ಸುಶೀಲ್ ಕುಮಾರ್ ಯಾದವ್, ಪ್ರತೀಕ್ ಎನ್. ಶೇತ್ ಹಾಗೂ ಅಭಿಷೇಕ್ ಧೋಬಲ್ ಅವರನ್ನು ಸಂಪರ್ಕಿಸಿತ್ತು. ಆದರೆ, ಜರ್ನಲ್ ಸಂಪರ್ಕಿಸಿದರೆ ಅದಕ್ಕೆ ಪ್ರತಿಕ್ರಿಯಿಸುವುದಾಗಿ ತಿಳಿಸಿರುವ ಅವರು ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.

ಇನ್ನೂ 10 ಪ್ರಬಂಧಗಳ ಪರಿಶೀಲನೆ

ಎಸ್‌ಯುಟಿಆರ್‌ಎ-ಪಿಐಸಿ ಯೋಜನೆಯಡಿ ಪ್ರಕಟವಾಗಿರುವ ಒಟ್ಟು 10 ಪ್ರಬಂಧಗಳನ್ನು ತಾವು ಪರಿಶೀಲಿಸುತ್ತಿರುವುದಾಗಿ ಫಿಲಿಪ್ಸ್ ತಿಳಿಸಿದ್ದಾರೆ.

ಐಐಟಿ ರೂರ್ಕಿ ಪ್ರಕಟಿಸಿರುವ ಮತ್ತೊಂದು ಪ್ರಬಂಧದಲ್ಲಿ ಗೋಮೂತ್ರವು ಚಿಕುನ್‌ಗುನ್ಯಾ ವೈರಸ್ ವಿರುದ್ಧ ಗಮನಾರ್ಹ ವೈರಸ್‌ ವಿರೋಧಿ ಚಟುವಟಿಕೆ ಹೊಂದಿದೆ ಎಂದು ಹೇಳಲಾಗಿದೆ. ಈ ಪ್ರಬಂಧದ ಸಮಗ್ರತೆ ಕುರಿತೂ ಅವರು ಎಸಿಎಸ್ ಅಗ್ರಿಕಲ್ಚರಲ್ ಸೈನ್ಸ್ ಆಯಂಡ್ ಟೆಕ್ನಾಲಜಿ ಜರ್ನಲ್‌ಗೆ ದೂರು ಸಲ್ಲಿಸಿದ್ದು, ಜರ್ನಲ್ ತಮ್ಮ ಆಕ್ಷೇಪಗಳನ್ನು ಪರಿಶೀಲಿಸಿ ತನಿಖೆ ಆರಂಭಿಸುವುದಾಗಿ ತಿಳಿಸಿದೆ.

'ಈ ಪ್ರಕಟಣೆಗಳಲ್ಲಿ ಹೆಚ್ಚಿನವು ಸಮರ್ಪಕ ವಿಮರ್ಶೆಗೆ ಒಳಗಾಗಿಲ್ಲ. ಇಂತಹ ಪ್ರಬಂಧಗಳು ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಹೇಗೆ ಪ್ರಕಟವಾದವು ಎಂಬುದು ಅರ್ಥವಾಗುತ್ತಿಲ್ಲ' ಎಂದು ಫಿಲಿಪ್ಸ್ ಹೇಳಿದ್ದಾರೆ.

'ಭಾರತದಲ್ಲಿ ಹುಸಿ ವಿಜ್ಞಾನವನ್ನು ಉತ್ತೇಜಿಸಲು ಸಾರ್ವಜನಿಕರ ತೆರಿಗೆ ಹಣವನ್ನು ಬಳಸಲಾಗಿದೆ. ಇದು ನಾಚಿಕೆಗೇಡಿನ ಸಂಗತಿ' ಎಂದು ಅವರು ಎಕ್ಸ್‌ನಲ್ಲಿ ಟೀಕಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries