HEALTH TIPS

NORTH KOREA: ಅಣ್ವಸ್ತ್ರ ಪರೀಕ್ಷೆ.. 5 ಲಕ್ಷ ಸೈನಿಕರಿಗೆ ಡ್ರೋನ್ ತರಬೇತಿ, ಶುರುವಾಯ್ತು ಯುದ್ಧದ ಭೀತಿ!

ಸಿಯೋಲ್: ಕೊರಿಯಾ ಪರ್ಯಾಯ ದ್ವೀಪದಲ್ಲಿ ಜಾಗತಿಕ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಸೇನೆಗೆ ಮಾರಕ ಹಾಗೂ ವಿನಾಶಕಾರಿ ಅಣ್ವಸ್ತ್ರ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಬಲಪಡಿಸುವಂತೆ ಕರೆ ನೀಡಿದ ಬೆನ್ನಲ್ಲೇ, ದಕ್ಷಿಣ ಕೊರಿಯಾ ಕೂಡ ಯುದ್ಧಕ್ಕೆ ಸಜ್ಜಾಗಿದೆ.

ಉತ್ತರ ಕೊರಿಯಾದ (North Korea) ಸವಾಲನ್ನು ಎದುರಿಸಲು ದಕ್ಷಿಣ ಕೊರಿಯಾ ತನ್ನ ಡ್ರೋನ್ ಯುದ್ಧ ಸಾಮರ್ಥ್ಯವನ್ನು ಹಿಂದೆಂದೂ ಕಾಣದ ಪ್ರಮಾಣದಲ್ಲಿ ವಿಸ್ತರಿಸುವುದಾಗಿ ಪ್ರಕಟಿಸಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದೊಂದಿಗಿನ ಎಲ್ಲಾ ಶಾಂತಿ ಮಾತುಕತೆಗಳನ್ನು ತಿರಸ್ಕರಿಸಿರುವ ಉತ್ತರ ಕೊರಿಯಾ, ಸತತವಾಗಿ ಸುಧಾರಿತ ಕ್ಷಿಪಣಿ ಹಾಗೂ ರಾಕೆಟ್ ಉಡಾವಣಾ ವ್ಯವಸ್ಥೆಗಳ ಪರೀಕ್ಷೆ ನಡೆಸುತ್ತಿರುವುದು ಈ ತಲ್ಲಣಕ್ಕೆ ಕಾರಣವಾಗಿದೆ.

ಶಸ್ತ್ರಾಸ್ತ್ರ ಪರೀಕ್ಷೆ ವೀಕ್ಷಿಸಿದ್ದ ಕಿಮ್‌ ಜಾಂಗ್‌ ಉನ್‌
ಉತ್ತರ ಕೊರಿಯಾದ ಅಧಿಕೃತ ಮಾಧ್ಯಮದ ಪ್ರಕಾರ, ಕಿಮ್ ಜಾಂಗ್ ಉನ್ ಅವರು ಇತ್ತೀಚೆಗಷ್ಟೇ ಶತ್ರುಗಳ ವಾಯುನೆಲೆಗಳು, ಪ್ರಮುಖ ಬಂದರುಗಳು ಹಾಗೂ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬಲ್ಲ ಟ್ಯಾಕ್ಟಿಕಲ್ ಬ್ಯಾಲಿಸ್ಟಿಕ್ ಕ್ಷಿಪಣಿಯ ವಾರ್ಹೆಡ್ ಮತ್ತು ಹೊಸ ಹೊವಿಟ್ಜರ್ ಗನ್‌ಗಳ ಪರೀಕ್ಷೆಯನ್ನು ಖುದ್ದಾಗಿ ವೀಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ್ದ ಕಿಮ್, ಯಾವುದೇ ಶತ್ರು ನಮ್ಮನ್ನು ಎದುರಿಸಲು ಧೈರ್ಯ ಮಾಡದಂತಹ ವಿನಾಶಕಾರಿ ಆಕ್ರಮಣಕಾರಿ ಸಾಮರ್ಥ್ಯವನ್ನು ಹೊಂದುವುದೇ ನಮ್ಮ ಗುರಿ. ಶತ್ರುಗಳ ಮನಸ್ಸಿನಲ್ಲಿ ಸದಾ ಭೀತಿ ಮೂಡಿಸುವುದೇ ನಮ್ಮ ಯುದ್ಧ ನಿರೋಧಕ ತಂತ್ರದ ಮುಖ್ಯ ಭಾಗ ಎಂದು ಗುಡುಗಿದ್ದರು.
ಇದಲ್ಲದೆ, ಇತ್ತೀಚೆಗಷ್ಟೇ ಉತ್ತರ ಕೊರಿಯಾ ತನ್ನ ಅತ್ಯಾಧುನಿಕ 5 ಸಾವಿರ ಟನ್ ಸಾಮರ್ಥ್ಯದ ಚೋಯೆ ಹ್ಯೋನ್ ಯುದ್ಧನೌಕೆಯನ್ನು ಸೇನೆಗೆ ಸೇರ್ಪಡೆಗೊಳಿಸಿದೆ. ರಷ್ಯಾ ಮತ್ತು ಚೀನಾದ ಬೆಂಬಲದೊಂದಿಗೆ ಬೀಗುತ್ತಿರುವ ಕಿಮ್, ಅಣ್ವಸ್ತ್ರ ತ್ಯಜಿಸಬೇಕು ಎಂಬ ಷರತ್ತನ್ನು ಅಮೆರಿಕ ಕೈಬಿಟ್ಟರೆ ಮಾತ್ರ ಮಾತುಕತೆ ಸಾಧ್ಯ ಎಂದು ಪಟ್ಟು ಹಿಡಿದಿದ್ದಾರೆ.

ಕಿಮ್‌ಗೆ ದಕ್ಷಿಣ ಕೊರಿಯಾ ಕೌಂಟರ್‌
ಉತ್ತರ ಕೊರಿಯಾದ ಈ ಅಣ್ವಸ್ತ್ರ ಹಾಗೂ ಸೇನಾ ವಿಸ್ತರಣೆಗೆ ತಕ್ಕ ಜವಾಬು ನೀಡಲು ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯ ಈಗ ಬೃಹತ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ರಕ್ಷಣಾ ಸಚಿವ ಆನ್ ಗ್ಯೂ-ಬ್ಯಾಕ್ ಅವರ ಪ್ರಕಾರ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕಡಿಮೆ ವೆಚ್ಚದ ಡ್ರೋನ್‌ಗಳು ಅತ್ಯಂತ ಪರಿಣಾಮಕಾರಿ ಶಸ್ತ್ರಾಸ್ತ್ರಗಳಾಗಿ ಹೊರಹೊಮ್ಮಿರುವುದನ್ನು ಮನಗಂಡು ದಕ್ಷಿಣ ಕೊರಿಯಾ ಈ ಹೊಸ ತಂತ್ರಕ್ಕೆ ಮುಂದಾಗಿದೆ. ಉತ್ತರ ಕೊರಿಯಾವು ರಷ್ಯಾದಿಂದ ಡ್ರೋನ್ ಮತ್ತು ಆಧುನಿಕ ಯುದ್ಧ ತಂತ್ರಜ್ಞಾನದ ಸಹಾಯ ಪಡೆಯುತ್ತಿರುವುದರಿಂದ, ಅದಕ್ಕೆ ಸೆಡ್ಡು ಹೊಡೆಯಲು ದಕ್ಷಿಣ ಕೊರಿಯಾ ಮುಂದಾಗಿದೆ.

ಯೋಜನೆಯ ಭಾಗವಾಗಿ ದಕ್ಷಿಣ ಕೊರಿಯಾವು ದೀರ್ಘ ವ್ಯಾಪ್ತಿಯ ಸ್ಫೋಟಕ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಿದೆ. ಇದರ ಜೊತೆಗೆ, ಶತ್ರುಗಳ ಮೇಲೆ ನಿಖರ ದಾಳಿ ನಡೆಸಬಲ್ಲ ಹಾಗೂ ಕಣ್ಗಾವಲು ಇಡಬಲ್ಲ 20 ಸಾವಿರಕ್ಕೂ ಹೆಚ್ಚು ಅತ್ಯಾಧುನಿಕ ಡ್ರೋನ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಅತ್ಯಂತ ಪ್ರಮುಖವಾಗಿ, ಸೇನೆ, ನೌಕಾಪಡೆ, ವಾಯುಪಡೆ ಹಾಗೂ ನೌಕಾ ಕಮಾಂಡೋಗಳು ಸೇರಿದಂತೆ ಒಟ್ಟು 5 ಲಕ್ಷ ಸೈನಿಕರಿಗೆ ವಿಶೇಷವಾಗಿ ಡ್ರೋನ್ ಯೋಧರು ಎಂಬ ತರಬೇತಿ ನೀಡಲು ಮುಂದಾಗಿದೆ. ಪ್ರತಿಯೊಬ್ಬ ಸೈನಿಕನೂ ತನ್ನ ವೈಯಕ್ತಿಕ ಬಂದೂಕನ್ನು ಬಳಸುವಷ್ಟೇ ಸುಲಭವಾಗಿ ಯುದ್ಧಭೂಮಿಯಲ್ಲಿ ಡ್ರೋನ್‌ಗಳನ್ನು ಆಪರೇಟ್ ಮಾಡುವಂತೆ ಸಜ್ಜುಗೊಳಿಸಲಾಗುತ್ತಿದ್ದು, ಕೊರಿಯಾ ಗಡಿಯಲ್ಲಿ ಸದ್ಯ ಯುದ್ಧದ ಭೀತಿ ಹೆಚ್ಚಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries