ನವದೆಹಲಿ: ಚಿನ್ನದ ಮಾರಾಟದ ಕುರಿತ ವರದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಳ್ಳಿಹಾಕಿದ್ದು, ಚಿನ್ನದ ಭೌತಿಕ ಸಂಗ್ರಹಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಚಿನ್ನದ ಸಂಗ್ರಹವು 880.52 ಟನ್‌ಗಳಷ್ಟೇ ಇದ್ದು, ಅದರಲ್ಲಿ ಯಾವುದೇ ಇಳಿಕೆ ಅಥವಾ ಮಾರಾಟ ನಡೆದಿಲ್ಲ ಎಂದು ತಿಳಿಸಿದೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸುವ ಉದ್ದೇಶದಿಂದ ಆರ್‌ಬಿಐ ತನ್ನಲ್ಲಿರುವ ಚಿನ್ನದ ಸಂಪತ್ತಿನ ಒಂದು ಭಾಗವನ್ನು ಮಾರಾಟ ಮಾಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸುದ್ದಿ ಸಂಸ್ಥೆ 'ಬ್ಲೂಮ್‌ಬರ್ಗ್ ಇಕನಾಮಿಕ್ಸ್' ವರದಿ ಮಾಡಿತ್ತು.
ಆರ್‌ಬಿಐ ಮೇ 22ರವರೆಗೆ ಎರಡು ವಾರಗಳ ಅವಧಿಯಲ್ಲಿ ಸುಮಾರು 12 ಶತಕೋಟಿ ಡಾಲರ್ ಮೌಲ್ಯದ ಚಿನ್ನದ ಮೀಸಲು ನಿಧಿಯನ್ನು ಮಾರಾಟ ಮಾಡಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದರ ಬೆನ್ನಲ್ಲೇ ಆರ್‌ಬಿಐ ಸ್ಪಷ್ಟನೆ ನೀಡಿದೆ.
ಈ ವರದಿ ಸತ್ಯಕ್ಕೆ ದೂರವಾದದ್ದು. ಆದ್ದರಿಂದ, ಸಾರ್ವಜನಿಕರು ಇಂತಹ ವಿಷಯಗಳಲ್ಲಿ ಆರ್‌ಬಿಐ ಕಾಲಕಾಲಕ್ಕೆ ಪ್ರಕಟಿಸುವ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಆರ್‌ಬಿಐ ಹೇಳಿದೆ.
ಈ ವರದಿಯ ಕುರಿತು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ಕೂಡ ಸತ್ಯಪರಿಶೀಲನೆ ನಡೆಸಿದೆ. ಆರ್‌ಬಿಐ ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು 2025ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 13.92 ಶೇಕಡಾ ಇತ್ತು. ಅದು 2026ರ ಮಾರ್ಚ್ 31ರ ವೇಳೆಗೆ 16.70 ಶೇಕಡಾಕ್ಕೆ ಏರಿಕೆಯಾಗಿದೆ. 2026ರ ಮೇ 22ರ ವೇಳೆಗೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿ 16.85 ಶೇಕಡಾಕ್ಕೆ ತಲುಪಿದೆ.

