ಅಯೋಧ್ಯೆ: ಇಲ್ಲಿಯ ರಾಮ ಮಂದಿರದಲ್ಲಿ ನಿಧಿ ದುರುಪಯೋಗದ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT), ಅದರ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಮಂದಿರದ ಸಿಬ್ಬಂದಿಗಳಿಗೆ ಅಯೋಧ್ಯೆಯನ್ನು ಬಿಟ್ಟು ಹೋಗದಂತೆ ಸೂಚನೆ ನೀಡಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಮೂರು ಸದಸ್ಯರ SIT ರವಿವಾರ ಲಖನೌಗೆ ತೆರಳುವ ಮುನ್ನ ಈ ಸೂಚನೆಯನ್ನು ನೀಡಿದೆ.
ಮಂದಿರದ ಮೂಲಗಳ ಪ್ರಕಾರ, ಟ್ರಸ್ಟ್ ಅಧಿಕಾರಿಗಳು ಮತ್ತು ಇತರ ವ್ಯಕ್ತಿಗಳ ವಿಚಾರಣೆಗೆ ಸಂಬಂಧಿಸಿದ ವರದಿಗಳು ಸೇರಿದಂತೆ ದೈನಂದಿನ ತನಿಖಾ ವರದಿಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ. ಈ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸುವ ಮುನ್ನ ಅದಕ್ಕೆ ಅಂತಿಮ ರೂಪ ನೀಡಲಾಗುವುದು.
ಇದೇ ವೇಳೆ, SIT ತನ್ನ ತನಿಖೆಯ ಕುರಿತು ವರದಿಗಳನ್ನು ಪ್ರತಿದಿನ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
SIT ತನಿಖೆಯು ನಿಧಿ ದುರುಪಯೋಗದ ಆರೋಪಕ್ಕೆ ಮಾತ್ರ ಸೀಮಿತವಾಗಿಲ್ಲ. ಮಂದಿರದ ಟ್ರಸ್ಟ್ ವಿವಿಧ ಹಂತಗಳಲ್ಲಿ ಖರೀದಿಸಿದ ಭೂಮಿ ಮತ್ತು ದೇವಾಲಯಕ್ಕೆ ಅಗತ್ಯವಿರುವ ಕಟ್ಟಡ ಸಾಮಗ್ರಿಗಳ ಖರೀದಿಯೂ ತನಿಖೆಯ ವ್ಯಾಪ್ತಿಯಲ್ಲಿ ಒಳಗೊಂಡಿವೆ ಎಂದು ಮೂಲಗಳು ಹೇಳಿವೆ.
ಮಂದಿರದ ಟ್ರಸ್ಟ್ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಭೂಮಿಯನ್ನು ಖರೀದಿಸಿದೆ ಎಂದು ಆರೋಪಿಸಲಾಗಿತ್ತು. ಎಸ್‌ಪಿ ಮತ್ತು ಎಎಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿದ್ದವು.
ಅಯೋಧ್ಯಾ ರಾಮಮಂದಿರಕ್ಕೆ ಬಂದ ದೇಣಿಗೆಗಳ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಟ್ರಸ್ಟ್ ನ ಮನವಿಯ ಮೇರೆಗೆ ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರವು SITಯನ್ನು ರಚಿಸಿತ್ತು.
SITಯಲ್ಲಿ ಲಖನೌ ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್. ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಸದಸ್ಯರಾಗಿದ್ದಾರೆ.

