ಈ ಕುರಿತು ಪಕ್ಷವು ಶುಕ್ರವಾರ ನಡೆದ ಸಾಮಾನ್ಯ ಮಂಡಳಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.
ಕಳೆದ ತಿಂಗಳು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಐಯುಎಂಎಲ್, ಸರ್ಕಾರ ರಚನೆಗಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬೆಂಬಲ ನೀಡಿದೆ.
ಆದರೆ, ಅದು ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಐಯುಎಂಎಲ್ ಮುಖ್ಯಸ್ಥ ಖಾದರ್ ಮೊಹಿದೀನ್, ''ದ್ರಾವಿಡ ಮಾದರಿಯ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಮ್ಮ ಪಕ್ಷ ನಿರೀಕ್ಷಿಸಿತ್ತು. ಇದಕ್ಕಾಗಿ ನಾವು ಚುನಾವಣೆಯಲ್ಲಿ ಶ್ರಮಿಸಿದ್ದೆವು. ಆದರೆ ದೇವರ ಇಚ್ಛೆ ಬೇರೆಯಾಗಿತ್ತು. ಟಿವಿಕೆಯ 'ಸೀಟಿ' ಚಿಹ್ನೆಯು ರಾಜ್ಯಾದ್ಯಂತ ಪ್ರತಿಧ್ವನಿಸಿತು. ಜನರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಬೆನ್ನಿಗೆ ನಿಂತರು ಮತ್ತು ಆ ಪಕ್ಷವು 108 ಸ್ಥಾನಗಳನ್ನು ಗೆದ್ದುಕೊಂಡಿತು'' ಎಂದು ಹೇಳಿದರು.
ತಮ್ಮ ಪಕ್ಷವು ಟಿವಿಕೆಗೆ ಬೆಂಬಲ ನೀಡದಿದ್ದರೆ ತಮಿಳುನಾಡಿನಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗುವ ಸಾಧ್ಯತೆ ಇತ್ತು. ಅದು ಪರೋಕ್ಷವಾಗಿ ಬಿಜೆಪಿ ಆಡಳಿತಕ್ಕೆ ಸಮಾನವಾಗುತ್ತಿತ್ತು ಎಂದು ಮೊಹಿದೀನ್ ಹೇಳಿದರು.

