ನವದೆಹಲಿ: ಸಂಸತ್‌ನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ಎನ್‌ಡಿಎ ಪಾಳಯ ತನ್ನ ಪ್ರಯತ್ನ ಮುಂದುವರಿಸಿದೆ. ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸುವುದಕ್ಕೆ ಈ ಬಹುಮತ ಅಗತ್ಯ. ಈ ಕಾರಣಕ್ಕೆ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ಟಿಎಂಸಿಯಲ್ಲಿ ಭುಗಿಲೆದ್ದಿರುವ ಬಂಡಾಯವು ಎನ್‌ಡಿಎಗೆ ನೆರವಾಗಲಿದೆ.
ಇತ್ತೀಚೆಗೆ ಮುಕ್ತಾಯಗೊಂಡಿರುವ ರಾಜ್ಯಸಭಾ ಚುನಾವಣೆಯು, ಮೇಲ್ಮನೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಗಡಿ ದಾಟುವುದಕ್ಕೆ ಎನ್‌ಡಿಎಗೆ ಅನುಕೂಲವಾಗಲಿದೆ. ಆದರೆ, ಟಿಎಂಸಿ ಬಂಡಾಯ ಸಂಸದರ ಬೆಂಬಲದ ಹೊರತಾಗಿಯೂ ಲೋಕಸಭೆಯಲ್ಲಿ ಮೂರನೇ ಎರಡಷ್ಟು ಬಹುಮತವು ಎನ್‌ಡಿಎಗೆ ಇನ್ನೂ ಮರೀಚಿಕೆ ಎನಿಸಲಿದೆ.
ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸುವುದಕ್ಕೆ 363 ಸಂಸದರ ಬೆಂಬಲ ಅಗತ್ಯ.
ಲೋಕಸಭೆಯಲ್ಲಿ ಟಿಎಂಸಿಯ 20 ಸಂಸದರು ಪ್ರತ್ಯೇಕ ಗುಂಪು ರಚಿಸಿಕೊಂಡಿದ್ದು, ಎನ್‌ಡಿಎಗೆ ಬೆಂಬಲ ಸೂಚಿಸಲು ಒಲವು ವ್ಯಕ್ತಪಡಿಸಿದ್ದಾರೆ. ಈ ಸದಸ್ಯರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಸೋಮವಾರ ಭೇಟಿ ಮಾಡಿ, ಟಿಎಂಸಿಯಿಂದ ತಾವು ಹೊರಬರುತ್ತಿರುವ ಕುರಿತ ಪತ್ರವನ್ನು ಅವರಿಗೆ ಸಲ್ಲಿಸಲಿದ್ದಾರೆ. ಈ ಬೆಳವಣಿಗೆ ಬಳಿಕ, ಲೋಕಸಭೆಯಲ್ಲಿ ಎನ್‌ಡಿಎ ಸಂಖ್ಯೆ 213ರ ಗಡಿ ತಲುಪಬಹುದು.
ರಾಜ್ಯಸಭೆ:
ರಾಜ್ಯಸಭೆಯಲ್ಲಿ ಸದ್ಯ ಎನ್‌ಡಿಎ ಸದಸ್ಯ ಬಲ ಸದ್ಯ 148. ಜಾರ್ಖಂಡ್ ಮತ್ತು ಮಿಜೋರಾಂನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲಲಿದೆ.
ಟಿಎಂಸಿಯ ಮೂವರು ಸಂಸದರು ರಾಜೀನಾಮೆ ನೀಡಿರುವ ಕಾರಣ, ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ನಡೆಯುವ ಉಪಚುನಾವಣೆಯಲ್ಲಿ ಈ ಮೂರೂ ಸ್ಥಾನಗಳನ್ನು ಎನ್‌ಡಿಎ ಸುಲಭವಾಗಿ ಗೆಲ್ಲಬಹುದಾಗಿದೆ. ಇದರೊಂದಿಗೆ ಅದರ ಸಂಖ್ಯಾಬಲ 154ಕ್ಕೆ ಏರಲಿದೆ.
ಆಗ, ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಎನ್‌ಡಿಎ ಪಾಳಯಕ್ಕೆ 9 ಸ್ಥಾನಗಳ ಕೊರತೆ ಉಂಟಾಗಲಿದೆ.
ಟಿಎಂಸಿಯ ಮತ್ತಷ್ಟು ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಸಾಧ್ಯತೆ ಇರುವದರಿಂದ, ಬಹುಮತಕ್ಕೆ ಬೇಕಾದ 163 ಸ್ಥಾನಗಳನ್ನು ಹೊಂದುವುದು ಎನ್‌ಡಿಎಗೆ ಸಾಧ್ಯವಾಗಬಹುದು.
ಆದರೆ, ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಎನ್‌ಡಿಎದ 10 ಸಂಸದರ ಅಧಿಕಾರಾವಧಿ ನವೆಂಬರ್‌ನಲ್ಲಿ ಅಂತ್ಯವಾಗಲಿದೆ. ಪ್ರಸಕ್ತ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷವು ಹೊಂದಿರುವ ಸದಸ್ಯರ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ, ಆ ಪಕ್ಷವು ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಸ್ಥಾನಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಖಚಿತ.
ಇನ್ನೊಂದೆಡೆ, ವಿಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಸದಸ್ಯ ಬಲ 64ಕ್ಕೆ ಇಳಿದಿದೆ. ಮೈತ್ರಿಕೂಟದಿಂದ ಡಿಎಂಕೆ ಹೊರನಡೆದ ಕಾರಣ 8 ಸದಸ್ಯರ ಸಂಖ್ಯೆ ಕಡಿಮೆಯಾಗಿದೆ. ಎಎಪಿಯ ಮೂವರು ಸಂಸದರು 'ಇಂಡಿಯಾ'ದಿಂದ ಅಂತರ ಕಾಯ್ದುಕೊಂಡಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಡಿ ಕ್ರಮವಾಗಿ 7 ಹಾಗೂ 6 ಸ್ಥಾನಗಳನ್ನು ಹೊಂದಿವೆ. ಇವುಗಳಲ್ಲದೇ, ಎಂಡಿಎಂಕೆ ಪಕ್ಷವು ಎನ್‌ಡಿಎ ಹಾಗೂ 'ಇಂಡಿಯಾ' ಪೈಕಿ ಯಾವ ಪಾಳಯಕ್ಕಾದರೂ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

