ನವದೆಹಲಿ: ಭಾರತವು ಮುಂದಿನ ವರ್ಷದಿಂದ 10 ರೂ. ಮತ್ತು 20 ರೂ.ಗಳ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ನೋಡಬಹುದು. ಆರ್‌ಬಿಐ ಯೋಜನೆಯ ಮೊದಲ ಹಂತದಲ್ಲಿ ಪಾಲ್ಗೊಳ್ಳಲು ಜಾಗತಿಕ ಪೂರೈಕೆದಾರರನ್ನು ಆಹ್ವಾನಿಸುವ ಮೂಲಕ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಚಲಾವಣೆಗಾಗಿ ಸಿದ್ಧತೆಗಳನ್ನು ಆರಂಭಿಸಿದೆ.
ಸುದ್ದಿಸಂಸ್ಥೆಯು ಉಲ್ಲೇಖಿಸಿರುವ ಅಧಿಕೃತ ಮೂಲಗಳ ಪ್ರಕಾರ, ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದರೆ 2027 ರಿಂದ ಪೂರ್ಣ ಪ್ರಮಾಣದಲ್ಲಿ 10 ರೂ. ಮತ್ತು 20 ರೂ.ಗಳ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲಾಗುವುದು.
ಆರ್‌ಬಿಐನ ಕರೆನ್ಸಿ ಮುದ್ರಣ ಅಂಗಸಂಸ್ಥೆಯಾದ ಭಾರತೀಯ ರಿಜರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ.ಲಿ. (ಬಿಆರ್‌ಬಿಎನ್‌ಎಂಪಿಎಲ್) 10 ರೂ ಮತ್ತು 20 ರೂ.ನೋಟುಗಳಿಗಾಗಿ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ತಲಾ 34,000 ರೀಮ್‌ಗಳಷ್ಟು ಬೈಆಯಕ್ಸಿಯಲ್ ಓರಿಯಂಟೆಡ್ ಪೊಲಿಪ್ರೊಪಿಲೀನ್ (ಬಿಒಪಿಪಿ) ಆಧಾರಿತ ಪಾಲಿಮರ್ ಸಬ್‌ಸ್ಟ್ರೇಟ್ ಶೀಟ್‌ಗಳನ್ನು ಪೂರೈಸಲು ಜಾಗತಿಕ ಬಿಡ್‌ಗಳನ್ನು ಆಹ್ವಾನಿಸಿದೆ. ಪ್ರತಿ ರೀಮ್ 500 ಶೀಟ್‌ಗಳನ್ನು ಹೊಂದಿರಲಿದೆ. ಬಿಡ್‌ಗಳನ್ನು ಸಲ್ಲಿಸಲು ಆಗಸ್ಟ್ 18 ಕೊನೆಯ ದಿನವಾಗಿದೆ.
ಪ್ರಸ್ತುತ ಖರೀದಿಯು ಕೇವಲ ತಕ್ಷಣದ ಅಗತ್ಯಕ್ಕೆ ಆಗಿದ್ದು, ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಇನ್ನಷ್ಟು ಮುಖಬೆಲೆಗಳ ನೋಟುಗಳು ಸೇರಿದಂತೆ ಹೆಚ್ಚಿನ ಬೇಡಿಕೆಗಳನ್ನು ಸಲ್ಲಿಸಲಾಗುವುದು ಎಂದು ಟೆಂಡರ್ ದಾಖಲೆಯಲ್ಲಿ ಹೇಳಲಾಗಿದೆ.
ಆರ್‌ಬಿಐ ಪ್ರಾಯೋಗಿಕ ಯೋಜನೆಗಾಗಿ ನೋಟುಗಳ ಮುಖಬೆಲೆಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಕಠಿಣ ನಿಯಮಗಳು ಮತ್ತು ಭದ್ರತಾ ಷರತ್ತುಗಳು
*ಬಿಡ್‌ದಾರರು ಚೀನಾ ಅಥವಾ ಪಾಕಿಸ್ತಾನದಲ್ಲಿ ಹೊಂದಿರುವ ತಮ್ಮ ವ್ಯವಹಾರಗಳನ್ನು ಈ ಭಾರತದ ಯೋಜನೆಯಿಂದ ಸಂಪೂರ್ಣವಾಗಿ ದೂರ ಇಡಬೇಕು.
*ಈ ದೇಶಗಳಿಂದ ಯಾವುದೇ ಕಚ್ಚಾವಸ್ತುಗಳನ್ನು ಬಳಸುವಂತಿಲ್ಲ ಮತ್ತು ಅಲ್ಲಿ ಕೆಲಸ ಮಾಡಿದ ಸಿಬ್ಬಂದಿಯನ್ನು ಈ ಯೋಜನೆಗೆ ನಿಯೋಜಿಸುವಂತಿಲ್ಲ.
*ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳ ಕಂಪೆನಿಗಳು ಬಿಡ್‌ಗೆ ಅರ್ಹತೆಯನ್ನು ಪಡೆಯಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ನೋಂದಣಿ ಸಮಿತಿಯಲ್ಲಿ ನೋಂದಾಯಿಸಿಕೊಂಡಿರಬೇಕು.
*ಅರ್ಹ ಬಿಡ್‌ದಾರರು ಭದ್ರತಾ ವೈಶಿಷ್ಟ್ಯಗಳನ್ನೊಳಗೊಂಡ ಪಾಲಿಮರ್ ಸಬ್‌ಸ್ಟ್ರೇಟ್‌ಗಳನ್ನು ಯಾವುದಾದರೂ ಸೆಂಟ್ರಲ್ ಬ್ಯಾಂಕ್ ಅಥವಾ ಬ್ಯಾಂಕ್‌ನೋಟ್ ಮುದ್ರಣ ಸಂಸ್ಥೆಗೆ ಪೂರೈಸಿರುವ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು ಮತ್ತು ಕನಿಷ್ಠ 20,400 ರೀಮ್‌ಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿರಬೇಕು.
*ಪೂರೈಸುವ ಪ್ಲಾಸ್ಟಿಕ್ ಶೀಟ್‌ಗಳು ಪ್ರಾಣಿಗಳ ಕೊಬ್ಬು ಮತ್ತು ಡಿಎನ್‌ಎ ಮುಕ್ತವಾಗಿರಬೇಕು.

