ನವದೆಹಲಿ: ಕೇಂದ್ರ ಸರಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ 'ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ, 2025' ಅನ್ನು ಅಂಗೀಕರಿಸಲು ಸಜ್ಜಾಗುತ್ತಿರುವಂತೆ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ಅತಿಯಾದ ಕೇಂದ್ರೀಕರಣದ ವಿರುದ್ಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು,ರಾಜ್ಯಗಳೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸಲು ಮತ್ತು ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸಲು ಶಿಫಾರಸು ಮಾಡಿದೆ.
ಸದಸ್ಯರಿಗೆ ವಿತರಿಸಲಾದ ಕರಡು ವರದಿಯ ಪ್ರಕಾರ, ನೀತಿ ಜಾರಿಯಲ್ಲಿ ಭಿನ್ನಾಭಿಪ್ರಾಯಗಳನ್ನು ಕಡೆಗಣಿಸುವ, ನಿಯಂತ್ರಕ ಸಂಸ್ಥೆಗಳನ್ನು ರದ್ದುಗೊಳಿಸುವ ಮತ್ತು ಧನಸಹಾಯವನ್ನು ನಿಯಂತ್ರಿಸುವ ವ್ಯಾಪಕ ಅಧಿಕಾರಗಳನ್ನು ಕೇಂದ್ರಕ್ಕೆ ನೀಡುವ ಪ್ರಮುಖ ನಿಬಂಧನೆಗಳಲ್ಲಿ ಬದಲಾವಣೆಗಳನ್ನು ಸಮಿತಿಯು ಶಿಫಾರಸು ಮಾಡಿದೆ. ಈ ನಿಯಮಗಳ ವಿರುದ್ಧ ಎನ್‌ಡಿಎ ಮಿತ್ರಪಕ್ಷಗಳು ಸೇರಿದಂತೆ ಹಲವು ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.
ಈ ಮಸೂದೆಯು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಮಂಡಳಿಯನ್ನು ವಿಸರ್ಜಿಸಿ ಏಕೀಕೃತ ನಿಯಂತ್ರಣ ಆಯೋಗವನ್ನು ರಚಿಸುವ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಯನ್ನು ತರಲು ಪ್ರಸ್ತಾವಿಸಿದೆ.
ನಿಬಂಧನೆ 47 ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಆಯೋಗ ಅಥವಾ ಯಾವುದೇ ಮಂಡಳಿಯನ್ನು ರದ್ದುಗೊಳಿಸಲು ಕೇಂದ್ರಕ್ಕೆ ಅವಕಾಶ ನೀಡುತ್ತದೆ. ಆದರೆ ಸಮಿತಿಯು ಈ 'ರದ್ದತಿ' ಅಧಿಕಾರವನ್ನು ಕೇವಲ ಅಸಾಧಾರಣ ಸಂದರ್ಭಗಳಲ್ಲಿ,ಸೀಮಿತ ಅವಧಿಗೆ ಮತ್ತು ಕೊನೆಯ ಆಯ್ಕೆಯಾಗಿ ಮಾತ್ರ ಬಳಸಬೇಕು ಎಂದು ಶಿಫಾರಸು ಮಾಡಿದೆ.
ಸಮಿತಿಯು ತನ್ನ ಶಿಫಾರಸಿನಲ್ಲಿ,ಕಾರ್ಯನಿರ್ವಹಿಸಲು ಅಸಮರ್ಥತೆ ಮತ್ತು ನಿರಂತರ ವೈಫಲ್ಯ ಎಂಬ ಪದಗಳನ್ನು ಕಾಯ್ದೆಯಲ್ಲಿ ವಸ್ತುನಿಷ್ಠ ಮತ್ತು ಪರಿಶೀಲಿಸಬಹುದಾದ ಮಾನದಂಡಗಳ ಮೂಲಕ ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು, ಇದರಿಂದಾಗಿ ಗೊಂದಲ ನಿವಾರಣೆಯಾಗಿ ನಿರಂಕುಶ ಅಧಿಕಾರ ಬಳಕೆಯನ್ನು ತಡೆಯಬಹುದು ಎಂದು ಹೇಳಿದೆ.
ನಿಬಂಧನೆ 45 ನೀತಿ ವಿಷಯಗಳ ಕುರಿತು ಕಡ್ಡಾಯ ನಿರ್ದೇಶನಗಳನ್ನು ಹೊರಡಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ. ಸಮಿತಿಯು ಇದಕ್ಕೆ ವಸ್ತುನಿಷ್ಠ ಮಿತಿಗಳು, ಕಾರ್ಯವಿಧಾನದ ಸುರಕ್ಷತೆಗಳು ಮತ್ತು ಪಾರದರ್ಶಕತೆಯ ಅಗತ್ಯಗಳನ್ನು ಅಳವಡಿಸಲು ಸೂಚಿಸಿದೆ. ಸರಕಾರದ ಅಧಿಕಾರದ ವ್ಯಾಪ್ತಿಯನ್ನು ಸೀಮಿತಗೊಳಿಸಲು 'ಈ ಕಾಯ್ದೆಯ ಉದ್ದೇಶಗಳಿಗಾಗಿ' ಎಂಬ ಪದಗಳನ್ನು ಸೇರಿಸಲು ಅದು ಪ್ರಸ್ತಾಪಿಸಿದೆ.
ಆಯೋಗದ ಅಡಿಯ ಮೂರು ಮಂಡಳಿಗಳಲ್ಲಿ ರಾಜ್ಯ ಸರಕಾರದ ನಾಮನಿರ್ದೇಶಿತ ಸದಸ್ಯರ ಸಂಖ್ಯೆಯನ್ನು ತಲಾ ಮೂರಕ್ಕೆ ಹೆಚ್ಚಿಸಲೂ ಜೆಪಿಸಿ ಶಿಫಾರಸು ಮಾಡಿದೆ.

