ಅಹ್ಮದಾಬಾದ್ : ಅಹ್ಮದಾಬಾದ್‌ನ ಪಟಾಕಿ ಕಾರ್ಖಾನೆಯೊಂದರಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 8 ಜನರು ಮೃತಪಟ್ಟಿದ್ದಾರೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹ್ಮೂದ್‌ಪುರ ಪ್ರದೇಶದ ರಾಮೋಲ್-ಗಾಟ್ರಾಡ್ ರಸ್ತೆಯ ಪಕ್ಕದ ತೆರೆದ ಮೈದಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಎಲ್.ಜಿ. ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
''ಪ್ರಾಥಮಿಕ ಮಾಹಿತಿಯ ಪ್ರಕಾರ ಘಟಕದಲ್ಲಿ 12ರಿಂದ 15 ಜನರು ಕೆಲಸ ಮಾಡುತ್ತಿದ್ದರು'' ಎಂದು ಜಂಟಿ ಪೊಲೀಸ್ ಆಯುಕ್ತ ಜೈಪಾಲ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಕಾರ್ಖಾನೆಯ ನಿರ್ವಾಹಕನನ್ನು ಮೆಹುಲ್ ದೋಡಿಯಾ ಎಂದು ಪೊಲೀಸರು ಗುರುತಿಸಿದ್ದಾರೆ. ಘಟಕದ ಪರವಾನಿಗೆಯನ್ನು ಈಗಾಗಲೇ ರದ್ದುಗೊಳಿಸಲಾಗಿತ್ತು. ಆದರೆ, ಇದರ ಹೊರತಾಗಿಯೂ ಅಲ್ಲಿ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದುವು ಎಂದು ಅವರು ತಿಳಿಸಿದ್ದಾರೆ.
ಸ್ಫೋಟದ ಕಾರಣವನ್ನು ನಿರ್ಧರಿಸಲು ಮತ್ತು ಸುರಕ್ಷತಾ ನಿಯಮಗಳ ಸಂಭವನೀಯ ಉಲ್ಲಂಘನೆಗಳನ್ನು ಪರಿಶೀಲಿಸಲು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಇತರ ತನಿಖಾ ಸಂಸ್ಥೆಗಳ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿವೆ ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ 'ಎಕ್ಸ್'ನ ಪೋಸ್ಟ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ''ಗುಜರಾತ್‌ನ ಅಹ್ಮದಾಬಾದ್‌ನ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಪ್ರಾಣ ಹಾನಿಯಾಗಿರುವ ಬಗ್ಗೆ ಕೇಳಿ ತೀವ್ರ ದುಃಖವಾಯಿತು. ಈ ಸಂದರ್ಭ ನನ್ನ ಮನಸ್ಸು ದುಃಖತಪ್ತ ಕುಟುಂಬಗಳ ಜೊತೆಗಿದೆ'' ಎಂದು ಅವರು ಹೇಳಿದ್ದಾರೆ.
ತಲಾ 2 ಲಕ್ಷ ರೂ. ಪರಿಹಾರ
ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್‌ಆರ್‌ಎಫ್)ಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಘೋಷಿಸಲಾಗಿದೆ.

