ನವದೆಹಲಿ; 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನಿಮೇಶ್ ಕುಜೂರ್ ವಿದೇಶಿ ನೆಲದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಜರ್ಮನಿಯ ವೆಟ್ಝ್ಲರ್ ನ ಎನ್ವಾಗ್ ಸ್ಟೇಡಿಯಾನ್ ನಲ್ಲಿ ನಡೆದ ಪ್ಯೂಮಾ ಫಾಸ್ಟ್ ಆರ್ಮ್ಸ್ ಫಾಸ್ಟ್ ಲೆಗ್ಸ್ 2026 ಕ್ರೀಡಾಕೂಟದ ಫೈನಲ್ ನಲ್ಲಿ 100 ಮೀಟರ್ ಓಟವನ್ನು 10.14 ಸೆಕೆಂಡ್ ಅವಧಿಯಲ್ಲಿ ಪೂರೈಸುವ ಮೂಲಕ ಎರಡನೆಯವರಾಗಿ ಹೊರಹೊಮ್ಮಿದರು.
ಅನಿಮೇಶ್ ಕುಜೂರ್ ಅವರು ವಿದೇಶಿ ನೆಲದಲ್ಲಿ 100 ಮೀಟರ್ ಓಟವನ್ನು ಕೇವಲ 10.14 ಸೆಕೆಂಡ್ ನಲ್ಲಿ ಪೂರೈಸಿದ ಪ್ರಪ್ರಥಮ ಭಾರತೀಯ ಅಥ್ಲೀಟ್ ಎನಿಸಿದರು. ಅಲ್ಲದೆ ಒಟ್ಟಾರೆಯಾಗಿ ಅತಿ ವೇಗವಾಗಿ 100 ಮೀಟರ್ ಓಟವನ್ನು ಪೂರೈಸಿದ ಎರಡನೆ ಭಾರತೀಯ ಆಟಗಾರರೆನಿಸಿದರು. 10.09 ಸೆಕೆಂಡ್ ನಲ್ಲಿ ಈ ಗುರಿಯನ್ನು ಪೂರೈಸಿ, ರಾಷ್ಟ್ರೀಯ ದಾಖಲೆ ಹೊಂದಿರುವ ಗುರಿವಿಂದರ್ ಸಿಂಗ್ ಹೆಸರಿನಲ್ಲಿ ಅತಿ ವೇಗವಾಗಿ 100 ಮೀಟರ್ ಓಟವನ್ನು ಪೂರೈಸಿದ ದಾಖಲೆಯಿದೆ.
ಇದಕ್ಕೂ ಮುನ್ನ, ಬೆಳಗ್ಗೆ ನಡೆದ ಹೀಟ್ ನಲ್ಲಿ 10.19 ಸೆಕೆಂಡ್ ಅವಧಿಯಲ್ಲಿ 100 ಮೀಟರ್ ಓಟವನ್ನು ಪೂರೈಸುವ ಮೂಲಕ, ತಾವು ಉತ್ತಮ ಲಯದಲ್ಲಿರುವ ಸೂಚನೆಯನ್ನು ಅನಿಮೇಶ್ ಕುಜೂರ್ ನೀಡಿದ್ದರು. ಅದನ್ನು ಅವರು ಫೈನಲ್ ನಲ್ಲಿ ಮತ್ತಷ್ಟು ಉತ್ತಮಪಡಿಸಿಕೊಂಡರು. ಅವರು ಇದಕ್ಕೂ ಮುನ್ನ 10.15 ಸೆಕೆಂಡ್ ಅವಧಿಯಲ್ಲಿ ಪೂರೈಸಿದ್ದ 100 ಮೀಟರ್ ಓಟದ ದಾಖಲೆಯನ್ನು ಈ ಓಟ ಮತ್ತಷ್ಟು ಉತ್ತಮಪಡಿಸಿತು. ಅವರು ಈ ಋತುವಿನಲ್ಲಿ ನಿರಂತರವಾಗಿ ತಮ್ಮ ಓಟದ ಅವಧಿಯನ್ನು ಕಡಿತಗೊಳಿಸಿಕೊಳ್ಳುತ್ತಲೇ ಸಾಗಿದ್ದಾರೆ.
ಈಗಾಗಲೇ 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅನಿಮೇಶ್ ಕುಜೂರ್, 100 ಮೀಟರ್ ಓಟದಲ್ಲಿ ದಾಖಲಾಗಿರುವ ಐದು ಅತಿ ವೇಗದ ಓಟಗಳ ಪೈಕಿ ಮೂರು ಅತಿ ವೇಗದ ಓಟಗಳ ದಾಖಲೆಯನ್ನು ಹೊಂದಿದ್ದಾರೆ. ಗುರುವಿಂದರ್ ಸಿಂಗ್ (10.09 ಸೆಕೆಂಡ್ ಮತ್ತು 10.17 ಸೆಕೆಂಡ್) ಹೆಸರಿನಲ್ಲಿ ಎರಡು ಅತಿ ವೇಗದ ಓಟದ ದಾಖಲೆಗಳಿದ್ದರೆ, ಅನಿಮೇಶ್ ಕುಜೂರ್ (10.14 ಸೆಕೆಂಡ್, 10.15 ಸೆಕೆಂಡ್ ಹಾಗೂ 10.18 ಸೆಕೆಂಡ್) ಹೆಸರಿನಲ್ಲಿ ಮೂರು ಅತಿ ವೇಗದ ಓಟದ ದಾಖಲೆಗಳಿವೆ.

