ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ನ್ಯೂಝಿಲೆಂಡ್ ಭೇಟಿಗೆ ಸಂಬಂಧಿಸಿದಂತೆ ಅವರ ವಯಸ್ಸನ್ನು ಪರಿಗಣಿಸಿ ವಿಶೇಷ ಲಾಜಿಸ್ಟಿಕ್ಸ್ ವ್ಯವಸ್ಥೆಗಳು ಹಾಗೂ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನ್ಯೂಝಿಲೆಂಡ್ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ಅವರಿಗೆ 75 ವರ್ಷ ವಯಸ್ಸಾಗಿರುವುದರಿಂದ ಭೇಟಿ ಆಯೋಜನೆಯಲ್ಲಿ ಕೆಲವು ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಬೇಕಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಝಿಲೆಂಡ್ ನ ಸುದ್ದಿ ಸಂಸ್ಥೆ Sಣuಜಿಜಿ ಪ್ರಕಟಿಸಿರುವ ವರದಿ ಪ್ರಕಾರ, ಪ್ರಧಾನಿ ಅವರ ಮುಂಗಡ ಭದ್ರತೆ ಮತ್ತು ಲಾಜಿಸ್ಟಿಕ್ಸ್ ತಂಡಗಳು ಆತಿಥೇಯ ಸರ್ಕಾರದೊಂದಿಗೆ ಸಮನ್ವಯ ನಡೆಸಿ, ಭದ್ರತಾ ವ್ಯವಸ್ಥೆಗಳ ಜತೆಗೆ ಕಾರ್ಯಕ್ರಮಗಳ ಆಯೋಜನೆ, ಸಂಚಾರ ಹಾಗೂ ದಿನಚರಿಗೆ ಸಂಬಂಧಿಸಿದ ಹಲವು ನಿರ್ದಿಷ್ಟ ಅಗತ್ಯಗಳನ್ನು ತಿಳಿಸಿವೆ.
ಪ್ರಧಾನಿ ಮೋದಿ ಅವರು 2025ರ ಸೆಪ್ಟೆಂಬರ್ 17ರಂದು 75 ವರ್ಷ ಪೂರೈಸಿದ್ದು, ಭೇಟಿ ವೇಳೆ ಅವರ ವೇಳಾಪಟ್ಟಿಯಲ್ಲಿ ವಿಶ್ರಾಂತಿಗೆ ಅವಕಾಶ ಕಲ್ಪಿಸುವ 'ನಿದ್ರೆ ಸಮಯ' ಅಥವಾ ವಿರಾಮದ ಅವಧಿಗಳನ್ನು ನಿಗದಿಪಡಿಸುವಂತೆ ಸಂಘಟಕರಿಗೆ ಸೂಚಿಸಲಾಗಿದೆ ಎಂದು ವರದಿ ಹೇಳಿದೆ.
ಇದಲ್ಲದೆ, ಪ್ರಧಾನಿ ಭೇಟಿ ನೀಡುವ ಕಾರ್ಯಕ್ರಮಗಳಿಗಾಗಿ ಮೆಟ್ಟಿಲುಗಳನ್ನು ಬಳಸಬೇಕಾಗದ ಸ್ಥಳಗಳಿಗೆ ಆದ್ಯತೆ ನೀಡುವಂತೆ ಆತಿಥೇಯ ಸರ್ಕಾರವನ್ನು ಕೋರಲಾಗಿದೆ. ಸುಮಾರು ಆರು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಮೆಟ್ಟಿಲುಗಳ ಮೇಲೆ ಬಿದ್ದ ಘಟನೆ ಹಿನ್ನೆಲೆಯಲ್ಲಿ ಈ ವಿನಂತಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2019ರ ಡಿಸೆಂಬರ್ 14ರಂದು ಉತ್ತರ ಪ್ರದೇಶದ ಕಾನ್ಪುರದ ಅಟಲ್ ಘಾಟ್‌ನಲ್ಲಿ 'ನಮಾಮಿ ಗಂಗೆ' ಯೋಜನೆಯ ಪ್ರಗತಿ ಪರಿಶೀಲನೆಗೆ ತೆರಳಿದ್ದ ವೇಳೆ ಮೋದಿ ಘಾಟ್ ನ ಮೆಟ್ಟಿಲುಗಳನ್ನು ಏರುತ್ತಿದ್ದಾಗ ಬಿದ್ದಿದ್ದರು. ವಿಶೇಷ ರಕ್ಷಣಾ ಪಡೆ (SಉP) ಸಿಬ್ಬಂದಿ ತಕ್ಷಣವೇ ನೆರವಿಗೆ ಧಾವಿಸಿ ಅವರನ್ನು ಎಬ್ಬಿಸಿದ್ದರು. ಬಳಿಕ ಕಾನ್ಪುರದ ಸ್ಥಳೀಯ ಆಡಳಿತವು ಅಸಮವಾಗಿದ್ದ ಮೆಟ್ಟಿಲುಗಳನ್ನು ತೆರವುಗೊಳಿಸಿ, ಉಳಿದ ಮೆಟ್ಟಿಲುಗಳಿಗೆ ಹೊಂದಿಕೆಯಾಗುವಂತೆ ಮರುನಿರ್ಮಿಸಲಾಗುವುದು ಎಂದು ಘೋಷಿಸಿತ್ತು.
ವರದಿ ಪ್ರಕಾರ, ಪ್ರಧಾನಿ ಅವರ ಭೇಟಿಗೆ ನ್ಯೂಝಿಲೆಂಡ್ ಅಧಿಕಾರಿಗಳು ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನೂ ಕೈಗೊಳ್ಳುತ್ತಿದ್ದಾರೆ. ಪ್ರಮುಖ ಕಾರ್ಯಕ್ರಮಗಳ ಸ್ಥಳಗಳಲ್ಲಿ ಪೊಲೀಸ್ ಸ್ನೈಪರ್ ಗಳನ್ನು ನಿಯೋಜಿಸುವುದು ಸೇರಿದಂತೆ ಬಹುಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ನ್ಯೂಝಿಲೆಂಡ್ ಅನ್ನು ಸಾಮಾನ್ಯವಾಗಿ ಕಡಿಮೆ ಅಪಾಯದ ರಾಷ್ಟ್ರವೆಂದು ಪರಿಗಣಿಸಲಾಗಿದ್ದರೂ, ಭಾರತೀಯ ಪ್ರಧಾನ ಮಂತ್ರಿಯವರ ಭದ್ರತೆಗೆ ಅನ್ವಯಿಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಭಾಗವಾಗಿ ಈ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಮೋದಿ ಅವರ ನ್ಯೂಝಿಲೆಂಡ್ ಭೇಟಿಯು ಭಾರತ-ನ್ಯೂಝಿಲೆಂಡ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು, ನಡೆಯುತ್ತಿರುವ ವ್ಯಾಪಾರ ಮಾತುಕತೆಗಳಿಗೆ ವೇಗ ನೀಡುವುದು ಹಾಗೂ ಅಲ್ಲಿನ ಭಾರತೀಯ ಮೂಲದ ಸಮುದಾಯದೊಂದಿಗೆ ಸಂವಾದ ನಡೆಸುವುದರ ಮೇಲೆ ಕೇಂದ್ರೀಕೃತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

