ಲಖನೌ: ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದ ನಕಲಿ 'ಅಂತರರಾಷ್ಟ್ರೀಯ ಕಾಲ್ ಸೆಂಟರ್' ಒಂದನ್ನು ಲಖನೌ ಪೊಲೀಸರು ಭೇದಿಸಿದ್ದು, 119 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಖನೌ ಪೊಲೀಸ್ ಕಮಿಷನರೇಟ್‌ನ ಸೈಬರ್ ಸೆಲ್ ಮತ್ತು ಸೈಬರ್ ಪೊಲೀಸ್ ಠಾಣೆಯ ಜಂಟಿ ತಂಡವು 'ಸಮಿತ್ ಬಿಲ್ಡಿಂಗ್'ನ 11ನೇ ಮಹಡಿಯಲ್ಲಿ ದಾಳಿ ನಡೆಸಿದೆ.
'ಸೋಲಾರಿಸ್ ಸೊಲ್ಯೂಷನ್' ಹೆಸರಿನ ಈ ಕಾಲ್ ಸೆಂಟರ್ ರಾತ್ರಿಯ ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. 'ಡಾಲರ್ ಆಯಪ್' ಬಳಸಿ ತಾಂತ್ರಿಕ ವಂಚನೆ ಹಾಗೂ ವಿವಿಧ ಆಮಿಷಗಳ ಮೂಲಕ ವಿದೇಶಿಯರನ್ನು ವಂಚಿಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತರಿಂದ 100 ಲ್ಯಾಪ್‌ಟಾಪ್, 178 ಮೊಬೈಲ್, ಡಿಜಿಟಲ್ ಸಾಧನ ಸೇರಿದಂತೆ ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮ್ಯಾನೇಜರ್‌ಗಳಾದ ಲಲಿತ್ ಖೈರಾಜನಿ ಮತ್ತು ವಿಕ್ರಮ್ ಸಿಂಗ್ ಪರ್ಮಾರ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

