ಗುವಾಹಟಿ: ಅಸ್ಸಾಂನಲ್ಲಿ ಭಾರಿ ಪ್ರವಾಹದಿಂದ ಜನರು ತತ್ತರಿಸಿಹೋಗಿದ್ದಾರೆ. ಸುಮಾರು 13 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
'ಬ್ರಹ್ಮಪುತ್ರ ಕಣಿವೆ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ ಮೇಲೆ ಸರ್ಕಾರ ತೀವ್ರ ನಿಗಾ ಇಟ್ಟಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಗೌರಿಸಾಗರ್, ಶಿವಸಾಗರ್, ನಾಜಿರಾ, ಆಮ್ಗುಡಿ ಮತ್ತು ಡೆಮೊ ಪ್ರದೇಶಗಳಲ್ಲಿ ಹಾನಿ ಹೆಚ್ಚಾಗಿದೆ. ನಾಗಲ್ಯಾಂಡ್ ಮತ್ತು ಅಸ್ಸಾಂನ ಬ್ರಹ್ಮಪುತ್ರ ನದಿ ಕಣಿವೆ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಪ್ರವಾಹ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆ ಆಗಿದ್ದು, 3 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅರುಣಾಚಲಪ್ರದೇಶ, ನಾಗಲ್ಯಾಂಡ್‌ಗಳಲ್ಲಿ ಗುರುವಾರದಿಂದ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

