ಬಹು ನಿರೀಕ್ಷೆಯ ನಂತರ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯದ 'ರಾಮಾಯಣ' ಟ್ರೇಲರ್ ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿದೆ. ಅಯೋಧ್ಯೆಯ ರಾಮ ಮತ್ತು ಮೂರು ಲೋಕಗಳ ಅಧಿಪತಿ ರಾವಣನ ನಡುವಿನ ಮಹಾಕಾವ್ಯದ ಹೋರಾಟದ ಕಥೆಯನ್ನು ಈ ಸಿನಿಮಾ ತೋರಿಸುತ್ತದೆ.
ಭಾರತದಲ್ಲಿ ಬ್ರಹ್ಮ ಮುಹೂರ್ತದಲ್ಲಿ ಬೆಳಿಗ್ಗೆ 4.15ಕ್ಕೆ 'ರಾಮಾಯಣ' ಟ್ರೇಲರ್ ಬಿಡುಗಡೆಯಾಯಿತು.
ಚಿತ್ರಮಂದಿರಗಳಲ್ಲಿ 'ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ' ಚಿತ್ರದೊಂದಿಗೆ ಟ್ರೇಲರ್ ಅನ್ನು ಪ್ರದರ್ಶಿಸಲಾಗಿದೆ.
ಯಶ್ (ರಾವಣ) ಪಾತ್ರದ ಕಥೆಯು ರಾಜ್ಯವಿಲ್ಲದ ಯುವಕನಾಗಿ ಆರಂಭವಾಗುತ್ತದೆ. ಬಳಿಕ ಆತ ರಾವಣ ಎಂಬ ಹೆಸರಿನಲ್ಲಿ ಮೂರು ಲೋಕಗಳ ಅಧಿಪತಿಯಾಗುತ್ತಾನೆ. ಯೋಧನಾಗಿ ರಾಮನ (ರಣ್‌ಬೀರ್ ಕಪೂರ್) ಶಕ್ತಿಯ ಝಲಕ್‌ಗಳು, ಸೀತೆಯ (ಸಾಯಿ ಪಲ್ಲವಿ) ಸ್ವಯಂವರ ಹಾಗೂ ರಾಮ, ಸೀತೆ ಮತ್ತು ಲಕ್ಷ್ಮಣನನ್ನು (ರವಿ ದುಬೆ) 14 ವರ್ಷಗಳ ವನವಾಸಕ್ಕೆ ಕಳುಹಿಸುವ ಕೈಕೇಯಿ (ಲಾರಾ ದತ್ತಾ) ಅವರ ಝಲಕ್‌ಗಳನ್ನೂ ತೋರಿಸಲಾಗಿದೆ. ಲಕ್ಷ್ಮಣನು ಶೂರ್ಪನಖಿಯ (ರಾಕುಲ್ ಪ್ರೀತ್ ಸಿಂಗ್) ಮೂಗು ಕತ್ತರಿಸುವುದು, ಸೀತೆಯ ಅಪಹರಣ ಹಾಗೂ ನಂತರದ ಯುದ್ಧದ ಝಲಕ್‌ಗಳನ್ನೂ ಟ್ರೇಲರ್‌ನಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಯಶ್ ನಟನೆಯ ಪ್ರಶಂಸೆ
ಆನ್‌ಲೈನ್‌ನಲ್ಲಿ ಯಶ್ ಅವರ ನಟನೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದ್ದರೆ, ಹನುಮಂತನ (ಸನ್ನಿ ಡಿಯೋಲ್) ಪಾತ್ರವನ್ನು ಟ್ರೇಲರ್‌ನಲ್ಲಿ ತೋರಿಸಿಲ್ಲ ಎಂದು ಕೆಲವರು ಪ್ರಶ್ನಿಸಿದ್ದಾರೆ.
ನಮಿತ್ ಮಲ್ಹೋತ್ರ ಅವರ ಆಓಇಉ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಸಿನಿಮಾದ ಕಥೆಯು ರಾಮ, ಸೀತೆ ಹಾಗೂ ಲಂಕಾಧಿಪತಿ ರಾವಣನ ನಡುವಿನ ಹೋರಾಟವನ್ನು ಒಳಗೊಂಡಿದೆ ಎಂಬುದು ಟ್ರೇಲರ್‌ನಲ್ಲಿ ತಿಳಿದುಬರುತ್ತದೆ. ಟ್ರೇಲರ್‌ನಲ್ಲಿ ತೋರಿಸಲಾದ ದೃಶ್ಯಗಳು ರೋಮಾಂಚಕವಾಗಿದ್ದು, ಬೆರಗುಗೊಳಿಸುವಂತಿವೆ. ಟ್ರೇಲರ್‌ನಲ್ಲಿ ಯಶ್ ಅವರ ಪಾತ್ರದ ವಿಜೃಂಭಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅವರು ಮೊದಲ ದೃಶ್ಯದಿಂದಲೇ ಕಾಣಿಸಿಕೊಂಡು ಕೊನೆಯ ದೃಶ್ಯದವರೆಗೂ ತಮ್ಮ ಛಾಪು ಮೂಡಿಸಿದ್ದಾರೆ.
ಈ ಟ್ರೇಲರ್‌ನಲ್ಲಿ 'ರಾಮಾಯಣ' ಚಿತ್ರದ ಮೊದಲ ನೋಟವನ್ನು ತೋರಿಸಲಾಗಿದೆ. ನಿತೀಶ್ ತಿವಾರಿ ನಿರ್ದೇಶನದಲ್ಲಿ ವಾಲ್ಮೀಕಿಯ ಕಾಲಾತೀತ ಮಹಾಕಾವ್ಯವನ್ನು ಮತ್ತೊಮ್ಮೆ ವಿಶ್ವದ ಮುಂದೆ ತರುವ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನ ಅದ್ದೂರಿಯಾಗಿ ತೆರೆಮೇಲೆ ಮೂಡಿಬರುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಕೇಂದ್ರ ಪಾತ್ರಗಳ ಪರಿಚಯದಿಂದ ಹಿಡಿದು ವಿಶಾಲವಾದ ಬ್ರಹ್ಮಾಂಡವನ್ನು ಪ್ರದರ್ಶಿಸುವವರೆಗೆ ದೃಶ್ಯಗಳು ಮಹಾಕಾವ್ಯದ ಸೊಬಗನ್ನು ಸೆರೆಹಿಡಿದಿವೆ.
ಸ್ಯಾನ್ ಡಿಯಾಗೋದಲ್ಲಿ ಬಿಡುಗಡೆ
'ರಾಮಾಯಣ' ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಅನ್ನು ಜುಲೈ 24ರಂದು ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ನಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರ, ನಿರ್ದೇಶಕ ನಿತೀಶ್ ತಿವಾರಿ ಹಾಗೂ ಪ್ರಮುಖ ತಾರೆಯರಾದ ರಣ್‌ಬೀರ್ ಕಪೂರ್ ಮತ್ತು ಯಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈಗಿನ 'ರಾಮಾಯಣ' ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಅದರ ವೈಭವದ ಗ್ರಾಫಿಕ್ಸ್. ಸಂಪೂರ್ಣ ಸಿನಿಮಾವನ್ನು ಐಮ್ಯಾಕ್ಸ್‌ನಲ್ಲಿ ಚಿತ್ರೀಕರಿಸಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಳೆಯ ಕಥೆಯನ್ನು ಹೊಸ ಅನುಭವ ನೀಡುವ ರೀತಿಯಲ್ಲಿ ಹೇಳಲಾಗುತ್ತಿದೆ.
ಟ್ರೇಲರ್ ಬಿಡುಗಡೆಗೂ ಮುನ್ನ ನಿರ್ಮಾಣ ತಂಡವು ನವದೆಹಲಿಯ ಭಾರತ್ ಮಂಟಪದಲ್ಲಿ 'ಪ್ರಥಮ್ ಸಂಕಲ್ಪ' ಎಂಬ ಭವ್ಯ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮೊದಲ ಬಾರಿಗೆ ಚಿತ್ರದ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿದ್ದರು. ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ಶೋಭನಾ, ರಾಕುಲ್ ಪ್ರೀತ್ ಸಿಂಗ್, ಅರುಣ್ ಗೋವಿಲ್, ಕುನಾಲ್ ಕಪೂರ್, ವಿವೇಕ್ ಒಬೆರಾಯ್ ಹಾಗೂ ಅಜಿಂಕ್ಯ ಡಿಯೋ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅದ್ದೂರಿ ಬಜೆಟ್‌ನ ಸಿನಿಮಾ
ನಮಿತ್ ಮಲ್ಹೋತ್ರ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಆಓಇಉ ಜೊತೆಗೆ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದರ ಬಜೆಟ್ 4000 ಕೋಟಿ ರೂ. ಎಂದು ವರದಿಯಾಗಿದೆ.
ಆಸ್ಕರ್ ಪ್ರಶಸ್ತಿ ವಿಜೇತರಾದ ಹ್ಯಾನ್ಸ್ ಜಿಮ್ಮರ್ ಹಾಗೂ ಎ. ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಪಂಕಜ್ ಕುಮಾರ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, 'ಮ್ಯಾಡ್ ಮ್ಯಾಕ್ಸ್' ಖ್ಯಾತಿಯ ಸಾಹಸ ನಿರ್ದೇಶಕ ಗೈ ನಾರಿಸ್ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರಕತೆಯನ್ನು ನಿತೀಶ್ ತಿವಾರಿ ಹಾಗೂ ಶ್ರೀಧರ್ ರಾಘವನ್ ಬರೆದಿದ್ದಾರೆ. 'ರಾಮಾಯಣ' ಚಿತ್ರವನ್ನು ಐಮ್ಯಾಕ್ಸ್‌ಗಾಗಿ ಚಿತ್ರೀಕರಿಸಲಾಗುತ್ತಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಹಾಗೂ ಎರಡನೇ ಭಾಗವು 2027ರ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

