ಕುಮಮೊಟೊ: ಜಪಾನ್ ನೈರುತ್ಯ ಭಾಗದಲ್ಲಿ ಭೂಕಂಪನದ ಪರಿಣಾಮವಾಗಿ ಮಂಗಳವಾರ ಸಂಭವಿಸಿದ್ದ ವಿವಿಧ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ತೀವ್ರವಾಗಿ ಹಾನಿಗೊಂಡಿರುವ ಶಾಪಿಂಗ್ ಮಾಲ್ ಮತ್ತು ಕುಸಿದಿರುವ ಮನೆಗಳಲ್ಲಿ ರಕ್ಷಣಾ ಸಿಬ್ಬಂದಿ ಬುಧವಾರವೂ ಶೋಧ ನಡೆಸಿದರು.
ಎಷ್ಟು ಜನ ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಅದರ ಪರಿಣಾಮವಾಗಿ ಏಯೊನ್ ಶಾಪಿಂಗ್ ಮಾಲ್‌ನ ಎರಡನೇ ಮಹಡಿ ಕುಸಿದಿತ್ತು. ಈ ವೇಳೆ ಮಾಲ್‌ನಲ್ಲಿ ಸಾವಿರಾರು ಜನರಿದ್ದರು.
'ಮಾಲ್‌ನ ಇನ್ನೊಂದು ಭಾಗದಲ್ಲಿ ಅನಿಲ ಸ್ಫೋಟವಾಗಿದ್ದು, ಅದಕ್ಕೂ ಮೊದಲು 3 ಸಾವಿರ ಗ್ರಾಹಕರನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆತರಲಾಗಿತ್ತು. ಆದರೆ ಹಲವು ಮಂದಿ ಮಾಲ್ ಒಳಗಡೆಯೇ ಕೆಲಸ ಮಾಡುತ್ತಿದ್ದರು. ಮೂರು ಜನ ನಾಪತ್ತೆಯಾಗಿದ್ದಾರೆ. ನಾಲ್ವರ ಸಾವು ದೃಢಪಟ್ಟಿದೆ' ಎಂದು ಮಾಲ್ ಆಡಳಿತ ತಿಳಿಸಿದೆ.
'ಯಟ್‌ಸುಶೀರೊದಲ್ಲಿ ಕಾರ್ಖಾನೆಯೊಂದರೆ ಚಿಮಿಣಿ ಕುಸಿದು ಬಿದ್ದಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳಡಿ ಇನ್ನೂ ನಾಲ್ಕು ಮಂದಿ ಸಿಲುಕಿರುವ ಶಂಕೆ ಇದೆ. ಏಳು ಮಂದಿಯನ್ನು ರಕ್ಷಿಸಲಾಗಿದೆ' ಎಂದು ಸ್ಥಳೀಯಾಡಳಿತ ತಿಳಿಸಿದೆ.
34,900 ಮನೆಗಳಿಗೆ ವಿದ್ಯುತ್ ಪೂರೈಕೆ ಮತ್ತು 15 ಸಾವಿರ ಮನೆಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ. 8,800 ಜನರು ತಮ್ಮ ಮನೆಯನ್ನು ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಬಿಸಿಲಿನ ತೀವ್ರತೆಯು ಅಧಿಕವಾಗಿರುವುದರಿಂದ ಹವಾನಿಯಂತ್ರಣ ವ್ಯವಸ್ಥೆ ಇರುವ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಬುಲೆಟ್ ರೈಲು ಸೇವೆಯು ಪುನರಾರಂಭಗೊಂಡಿಲ್ಲ. ಕುಮಮೊಟೊದಲ್ಲಿನ ವಿಮಾನ ನಿಲ್ದಾಣ ಬುಧವಾರ ಕಾರ್ಯಾಚರಣೆ ಆರಂಭಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ವಿಮಾನಸಂಸ್ಥೆಗಳು ವಿಮಾನ ಸಂಚಾರವನ್ನು ರದ್ದುಗೊಳಿಸಿವೆ.
ಜಪಾನ್‌ನಲ್ಲಿ ನಡೆದ ಭೂಕಂಪನದಿಂದಾಗಿ ಮನೆಯೊಂದು ಕುಸಿದಿರುವ ದೃಶ್ಯ - ಎಎಫ್‌ಪಿ ಚಿತ್ರ

