ನವದೆಹಲಿ: ದೇಶದಲ್ಲಿ ಸೆಮಿಕಂಡಕ್ಟರ್ ಮತ್ತು ಮೊಬೈಲ್ ಫೋನ್ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಎರಡು ಪ್ರಮುಖ ಉತ್ಪಾದನಾ ಉಪಕ್ರಮಗಳಿಗೆ ₹1.9 ಲಕ್ಷ ಕೋಟಿ ವಿನಿಯೋಗಿಸಲು ಕೇಂದ್ರದ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ವಿಸ್ತರಣೆ ಮತ್ತು ಮೊಬೈಲ್ ಉತ್ಪಾದನೆ ಹೆಚ್ಚಿಸುವ ಮೂಲಕ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಭಾರತದ ಸ್ಥಾನ ಉತ್ತಮಗೊಳಿಸುವ ಉದ್ದೇಶವನ್ನು ಕೇಂದ್ರ ಹೊಂದಿದೆ.
ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸೆಮಿಕಾನ್ 2.0 ಯೋಜನೆಗಾಗಿ ₹1.27 ಲಕ್ಷ ಕೋಟಿ ಅನುಮೋದಿಸಲಾಗಿದೆ. ಇದರ ಜೊತೆಗೆ, ಮೊಬೈಲ್ ಫೋನ್ ಉತ್ಪಾದನಾ ಯೋಜನೆಗಾಗಿ ₹62,500 ಕೋಟಿ ನೀಡಲೂ ನಿರ್ಧರಿಸಲಾಗಿದೆ. ಪ್ರಾದೇಶಿಕ ಉತ್ಪಾದನೆ ಹೆಚ್ಚಳ, ರಫ್ತು ಉತ್ತೇಜನ ಮತ್ತು ಮೊಬೈಲ್ ಫೋನ್ ಉದ್ಯಮದಲ್ಲಿ ಮೌಲ್ಯವರ್ಧನೆ ಉದ್ದೇಶ ಹೊಂದಲಾಗಿದೆ.
ಭಾರತದ ಮೊದಲ ಸೆಮಿಕಂಡಕ್ಟರ್ ಮಿಷನ್ ಅಡಿ ಚಿಪ್ ಡಿಸೈನ್, ಸೆಮಿ ಕಂಡಕ್ಟರ್ ಉಪಕರಣಗಳು ಮತ್ತು ಸಾಮಗ್ರಿಗಳು, ತಯಾರಿಕಾ ಸೌಲಭ್ಯಗಳು, ಸುಧಾರಿತ ಪ್ಯಾಕೇಜಿಂಗ್ ಮತ್ತು ಪರೀಕ್ಷೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
'ಈ ಯೋಜನೆ ಅಂತ್ಯದ ವೇಳೆ ನಾವು ದೇಶೀಯ ಚಿಪ್ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುತ್ತೇವೆ' ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಹೊಸ ಯೋಜನೆಯು ₹4 ಲಕ್ಷ ಕೋಟಿ ಬಂಡವಾಳ ಆಕರ್ಷಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಯೋಜನೆಯ ಅವಧಿಯಲ್ಲಿ ₹2 ಲಕ್ಷ ಕೋಟಿ ಮೌಲ್ಯದ ಸೆಮಿಕಂಡಕ್ಟರ್ ಉತ್ಪಾದನೆಯಾಗಲಿದೆ ಎಂದು ವರದಿ ತಿಳಿಸಿದೆ.
ಇದೇವೇಳೆ. 2026-27 ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಮೊಬೈಲ್ ತಯಾರಕರಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನವನ್ನು ಒದಗಿಸುವ ನಿಟ್ಟಿನಲ್ಲಿ ₹62,500 ಕೋಟಿ ವೆಚ್ಚದ ಮೊಬೈಲ್ ಫೋನ್ ಉತ್ಪಾದನಾ ಯೋಜನೆಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವೈಷ್ಣವ್ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಸುಮಾರು ₹39 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಚಿತ ಉತ್ಪಾದನೆ ಹೆಚ್ಚಳದ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಸುಮಾರು 60,000 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

