ನವದೆಹಲಿ: ಇ20 ಪೆಟ್ರೋಲ್ ಬಳಕೆಯ ಕಾರಣದಿಂದಾಗಿ ತೊಂದರೆ ಅನುಭವಿಸಿದ ಒಂದೇ ಒಂದು ಕಾರನ್ನು ಹೆಸರಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಸವಾಲು ಹಾಕಿದ್ದಾರೆ.
ಇ20 ಪೆಟ್ರೋಲ್ ಬಳಕೆಯಿಂದಾಗಿ ವಾಹನದ ಇಂಧನ ದಕ್ಷತೆ ಕಡಿಮೆ ಆಗಿದೆ ಎಂಬ ದೂರುಗಳು ವ್ಯಾಪಕವಾಗಿರುವ ಸಂದರ್ಭದಲ್ಲಿ ಅವರು ಹೀಗೆ ಹೇಳಿದ್ದಾರೆ.
ಭಾರತವು ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತ ಆಗಿರುವುದು ಆರ್ಥಿಕ ಹೊರೆಯೂ ಹೌದು, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಸಮಸ್ಯೆಯೂ ಹೌದು. ಹೀಗಾಗಿ, ಶುದ್ಧ ಇಂಧನವನ್ನು ಬಳಸುವುದು ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
'ಇ20 ಪೆಟ್ರೋಲ್ ಬಳಕೆಯಿಂದಾಗಿ ಯಾವ ಕಾರೂ ಸಮಸ್ಯೆ ಎದುರಿಸಿಲ್ಲ... ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಇರುವ ಪೆಟ್ರೋಲ್ ಬಳಕೆಯ ಬಗ್ಗೆ ಸುಳ್ಳು ಸಂಕಥನಗಳನ್ನು ಹರಡಲಾಗುತ್ತಿದೆ. ಇವೆಲ್ಲ ಹಣ ಪಾವತಿಸಿ ನಡೆಸುವ ಅಭಿಯಾನಗಳು' ಎಂದು ಅವರು ದೂರಿದ್ದಾರೆ.
ಭಾರತದ ಪೆಟ್ರೋಲ್ ಬಂಕ್‌ಗಳಲ್ಲಿ ಇ20 (ಶೇ 20ರಷ್ಟು ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್) ಮಾರಾಟ ಮಾಡಲಾಗುತ್ತಿದೆ. ಇಲ್ಲಿ ವಾಹನ ಮಾಲೀಕರಿಗೆ ಬೇರೆ ಆಯ್ಕೆ ಇಲ್ಲ. ಬ್ರೆಜಿಲ್‌ನಲ್ಲಿ ಇಂಧನ ತುಂಬಿಸಿಕೊಳ್ಳುವಾಗ ಆಯ್ಕೆ ನೀಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಇರುವ ಪೆಟ್ರೋಲ್ ಆಯ್ಕೆ ಮಾಡಿಕೊಂಡರೆ ಅಲ್ಲಿ ರಿಯಾಯಿತಿ ಸಿಗುತ್ತದೆ.
'ಗಡ್ಕರಿ ಕುಟುಂಬ ಸದಸ್ಯರು ಎಥೆನಾಲ್ ಉತ್ಪಾದನಾ ಉದ್ಯಮದಲ್ಲಿ ಇದ್ದಾರೆ, ಹೀಗಾಗಿ ಗಡ್ಕರಿ ಅವರು ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್ ಬಳಕೆಗೆ ಒತ್ತು ನೀಡುತ್ತಿದ್ದಾರೆ' ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, 'ಕುಟುಂಬದ ಸದಸ್ಯರು ಸಕ್ಕರೆ ಕಾರ್ಖಾನೆಗಳ ಮಾಲೀಕರು. ಅವರ ಕಂಪನಿಗಳು ಎಥೆನಾಲ್ ಉತ್ಪಾದನೆಯನ್ನು ಅವಲಂಬಿಸಿಲ್ಲ' ಎಂದಿದ್ದಾರೆ.
ಜೋಳದಿಂದ ಎಥೆನಾಲ್ ಉತ್ಪಾದಿಸುವ ಕ್ರಮದಿಂದಾಗಿ ಉತ್ತರ ಪ್ರದೇಶ, ಬಿಹಾರದ ರೈತರಿಗೆ ಹೆಚ್ಚುವರಿಯಾಗಿ ಒಟ್ಟು ₹45 ಸಾವಿರ ಕೋಟಿ ಆದಾಯ ದೊರೆತಿದೆ ಎಂದಿದ್ದಾರೆ.

