ತಿರುವನಂತಪುರಂ: ವಯನಾಡ್ ಜಿಲ್ಲೆಯಲ್ಲಿ ಸುರಂಗ ರಸ್ತೆ ನಿರ್ಮಾಣ ವೇಳೆ ಸಂಭವಿಸಿದ ಮಣ್ಣು ಕುಸಿತ ಅವಘಡ ಕುರಿತಂತೆ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ತನಿಖೆಗಳನ್ನು ನಡೆಸಲಿದೆ ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಬುಧವಾರ ಹೇಳಿದ್ದಾರೆ.
'ಪರಿಸರ ಅನುಮೋದನೆ ನೀಡುವ ವೇಳೆ ಕೇಂದ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಯೋಜನೆ ಗುತ್ತಿಗೆ ಪಡೆದಿರುವ ಕಂಪನಿಯು ಕಾಮಗಾರಿ ವೇಳೆ ಪಾಲನೆ ಮಾಡಿತ್ತೇ ಎಂಬುದು ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು' ಎಂದು ಸಚಿವ ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
'ಮಣ್ಣು ಕುಸಿತಕ್ಕೆ ಸಂಬಂಧಿಸಿದ ವರದಿಗಳನ್ನು ಪರಿಶೀಲಿಸಲು ಹಾಗೂ ಈ ಅವಘಡ ಸಂಭವಿಸಲು ಕಾರಣವಾದ ಅಂಶಗಳ ಪತ್ತೆಗೆ ತಾಂತ್ರಿಕ ಹಾಗೂ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಸರ್ಕಾರ ನಿರ್ಧರಿಸಿದೆ' ಎಂದಿದ್ದಾರೆ.
'ಕಾಮಗಾರಿ ನಡೆಯುತ್ತಿರುವ ಸ್ಥಳದ ಮೇಲ್ಭಾಗದಲ್ಲಿ ಮಣ್ಣು ಕುಸಿತವಾಗಿದೆ ಎಂಬ ವರದಿಗಳಿವೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು' ಎಂದು ಸತೀಶನ್ ಹೇಳಿದ್ದಾರೆ.
₹5 ಲಕ್ಷ ಪರಿಹಾರ
'ಈ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಕ್ಷಣವೇ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಗೆ ತಗಲುವ ವೆಚ್ಚಗಳನ್ನು ಕೂಡ ಸರ್ಕಾರವೇ ಭರಿಸಲಿದೆ' ಎಂದು ತಿಳಿಸಿದ್ದಾರೆ.
ವಯನಾಡ್ ಜಿಲ್ಲೆಯ ಕಳ್ಳಾಡಿ ಸಮೀಪ ಮಂಗಳವಾರ ಸಂಭವಿಸಿದ್ದ ಮಣ್ಣು ಕುಸಿತ ಅವಘಡದಲ್ಲಿ ಮೂವರು ಮೃತಪಟ್ಟು, ಇತರ ಐದು ಮಂದಿ ನಾಪತ್ತೆಯಾಗಿದ್ದರು. ಈ ಕುರಿತು ಚರ್ಚಿಸಲು ಸಚಿವ ಸಂಪುಟ ಸಭೆ ಕರೆಯಲಾಗಿತ್ತು.
ವಿ.ಸಿ.ಸತೀಶನ್ ಕೇರಳಂ ಮುಖ್ಯಮಂತ್ರಿಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಅಧ್ಯಯನಕ್ಕೆ ನಾನು ವಿಪಕ್ಷ ನಾಯಕನಾಗಿದ್ದಾಗ ಒತ್ತಾಯಿಸಿದ್ದೆ. ಆಗ ನನ್ನ ಕುರಿತು ಲೇವಡಿ ಮಾಡಿದ ಸಿಪಿಎಂ ನನ್ನನ್ನು ಅಭಿವೃದ್ಧಿ ವಿರೋಧಿ ಎಂದು ಜರಿದಿತ್ತು.

