ಟೆಹಾರನ್: ಇರಾನ್ ಮೇಲೆ ಅಮೆರಿಕ ಮತ್ತೊಂದು ಸುತ್ತಿನ ವೈಮಾನಿಕ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪೂರ್ವ ಏಷ್ಯಾದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತಿದಾಳಿ ನಡೆಸಿದೆ.
ಇದೇ ವೇಳೆ, ಅಮೆರಿಕ ತನ್ನ ಆಕ್ರಮಣವನ್ನು ನಿಲ್ಲಿಸುವವರೆಗೂ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಲಾಗುವುದು ಎಂದು ಇರಾನ್ ಎಚ್ಚರಿಸಿದೆ.
ಇರಾನ್‌ನ ನೈರುತ್ಯ ಪ್ರದೇಶದಲ್ಲಿ ಅಮೆರಿಕದ 'ಎಂಕ್ಯೂ-9' ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿದೆ.
ಆಸ್ಪತ್ರೆ ಮೇಲೆ ಬಾಂಬ್ ದಾಳಿ: ಅಮೆರಿಕದ ಬಾಂಬ್ ದಾಳಿಯಿಂದ ಇರಾನ್‌ನ ಅಹ್ವಾಜ್ ನಗರದಲ್ಲಿರುವ 'ಶಹೀದ್ ಬಘೇಯ್' ಆಸ್ಪತ್ರೆಗೆ ಹಾನಿಯಾಗಿದೆ ಎಂದು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ಹಾನಿಯಾಗಿದ್ದು, ಕೀಮೋಥೆರಪಿ ಪಡೆಯುತ್ತಿದ್ದ ಮಕ್ಕಳು ಸೇರಿದಂತೆ ನೂರಾರು ರೋಗಿಗಳನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ಖೆಶ್ಮ್ ದ್ವೀಪ, ಬಂದರ್ ಅಬ್ಬಾಸ್, ಸಿರಿಕ್, ಚಬಹಾರ್, ಕೊನಾರ್ಕ್, ರಾಸ್ಕ್ ಸಿಟಿ, ಖೋಂದಾಬ್ ಮತ್ತು ಪಶ್ಚಿಮದ ಖೋರಮಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಬಲ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ಇರಾನ್‌ನ ನಾಗರಿಕ ಪರಮಾಣು ಸ್ಥಾವರ ಇರುವ ಬುಶೆಹರ್ ಮೇಲೂ ಅಮೆರಿಕ ಹೊಸದಾಗಿ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.
35 ಜನ ಸಾವು: ಅಮೆರಿಕ ಪಡೆಗಳು ನಡೆಸಿದ ದಾಳಿಯಿಂದ ದೇಶದಾದ್ಯಂತ ಇದುವರೆಗೆ 35 ಜನರು ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ರಾಜಧಾನಿ ಟೆಹರಾನ್‌ನಲ್ಲಿ ಶತ್ರು ಪಡೆಗಳ ದಾಳಿಯನ್ನು ಎದುರಿಸಲು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್ ಹೇಳಿದೆ.

